ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಇಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಇಬ್ಬರು ಸಹಚರರನ್ನು ಬಂಧಿಸಿದ್ದು, ಅವರಿಂದ ಶಸಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿಸಲಾಗಿರುವ ಉಗ್ರ ಸಹಚರರನ್ನು ಅವಂತಿಪೋರಾದ ಮುಜಾಮಿಲ್ ಆಯೊಬ್ ಭಟ್ ಮತ್ತು ಸುಹೈಲ್ ಮನ್ಜೂರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಇವರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಆರೋಪದ ಮೇರೆಗೆ ದಕ್ಷಿಣ ಕಾಶ್ಮೀರ ಜಿಲ್ಲೆಯ ಅವಂತಿಪೋರಾದಲ್ಲಿ ಬಂಧಿಸಲಾಯಿತು ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ಬಂಧಿತರಿಂದ ಎಕೆ-47 ರೈಫಲ್ಸ್ ನ 383 ಸುತ್ತು ಗುಂಡುಗಳು ಸೇರಿದಂತೆ ಅಪಾರದ ಪ್ರಮಾಣದ ಶಸಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.
ಬಂಧಿತ ಉಗ್ರರ ಸಹಚರರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಗಳೊಂದಿಗೆ ಸಂಪರ್ಕ ಹೊಂದಿದ್ದರು. ಉಗ್ರ ಚಟುವಟಿಕೆಗಳಿಗೆ ನೆಲೆ ಒದಗಿಸುತ್ತದಲ್ಲದೇ ಶಸಾಸ್ತ್ರಗಳ ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ವಕ್ತಾರರು ತಿಳಿಸಿದ್ದಾರೆ.