ನವದೆಹಲಿ: ಶುಕ್ರವಾರ ನವೆಂಬರ್ 5 ರಂದು ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರಲ್ಲದೆ 12 ಅಡಿಗಳಷ್ಟು ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಉದ್ಘಾಟಿಸಿದ್ದರು.
ಈ ಭೇಟಿ ಸಂದರ್ಭದ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಮೋದಿ, ಬಿಜೆಪಿ ಅಭಿಮಾನಿಗಳು ಪ್ರಚಾರಾರ್ಥ ಈ ಚಿತ್ರಗಳನ್ನು ಹಂಚಿಕೊಂಡರೆ, ವಿರೋಧಿ ಪಾಳೆಯದವರು ಈ ಶೋ ಆಫ್ ಬೇಕಿತ್ತಾ ಎನ್ನುವ ಅರ್ಥದಲ್ಲಿ ಈ ಚಿತ್ರಗಳನ್ನು ಹಂಚಿಕೊಂಡು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಲ್ಲಕ್ಕಿಂತ ಅಚ್ಚರಿ ಎಂದರೆ ಸೋಷಿಯಲ್ ಮೀಡಿಯಾ ಬಳಕೆದಾರರು ಮೋದಿ ಕೇದಾರನಾಥ ಭೇಟಿ ಸಂದರ್ಭದ ವಿಡಿಯೋಗಳಲ್ಲಿ ಮೋದಿ ಶೂ ಧರಿಸಿರುವುದನ್ನು ಪತ್ತೆ ಹಚ್ಚಿದ್ದು, ಮೋದಿ ನಡೆ ವಿವಾದಕ್ಕೆ ಕಾರಣವಾಗಿದೆ.
ಒಂದು ವೇಳೆ ರಾಹುಲ್ ಗಾಂಧಿ ಈ ಕೃತ್ಯ ಎಸಗಿದ್ದರೆ ದೇಶಾದ್ಯಂತ ಅವರನ್ನು ದೇಶದ್ರೋಹಿ ಎಂಬಂತೆ ಪ್ರತಿಬಿಂಬಿಸಲಾಗುತ್ತಿತ್ತು ಎಂದು ಕಾಂಗ್ರೆಸ್ ಕಾರ್ಯಕರ್ತರು ಟೀಕಿಸಿದ್ದಾರೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಮೋದಿ ದೇವಾಲಯ ಆವರಣದಲ್ಲಿ ಶೂ ಧರಿಸಿ ನಡೆಯುತ್ತಿರುವ ವಿಡಿಯೊ ಹಂಚಿಕೊಂಡು, ಮೋದಿ ದೇವಾಲಯದಲ್ಲಿ ಶೂ ಧರಿಸಿ ನಮಸ್ಕರಿಸುತ್ತಿದ್ದಾರೆ ಎಂದರೆ ಅದೂ ಸಂಪ್ರದಾಯವಾಗಿರಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ನರೇಂದ್ರ ಮೋದಿ ಧರಿಸಿರುವುದು ಶೂ ಅಲ್ಲ, ಬಟ್ಟೆಯ ಕವಚ. ಅಲ್ಲಿನ ಚಳಿಯಲ್ಲಿ ಭಕ್ತಾದಿಗಳು ವುಲನ್ ಸಾಕ್ಸ್ ಧರಿಸುವುದು ಸಾಮಾನ್ಯ ಎಂದು ಮೋದಿ ಅಭಿಮಾನಿಗಳು ಬ್ಯಾಟಿಂಗ್ ಮಾಡುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಈಗಷ್ಟೆ ಚಳಿಗಾಲದ ಕಾರಣದಿಂದ ಕೇದಾರನಾಥ ಪ್ರವೇಶ ನಿರ್ಬಂಧಿಸಲು ದೇವಾಲಯದ ವೆಬ್ ಸೈಟಲ್ಲಿ ಬುಕಿಂಗ್ ಸೌಲಭ್ಯ ಸ್ಥಗಿತಗೊಳಿಸಲಾಗಿದೆ.