ಶ್ರೀನಗರ: ಕಣಿವೆಯಲ್ಲಿ ಆಯ್ದ ಹತ್ಯೆಗಳು ಕೊನೆಗೊಂಡ ನಂತರ ಮತ್ತು ಸಾಮಾನ್ಯ ಜನರು ಇಲ್ಲಿ ಮುಕ್ತವಾಗಿ ಸಂಚರಿಸಲು ಸಾಧ್ಯವಾದ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕ ಸೋಮವಾರ ಹೇಳಿದೆ.
ಕಾಶ್ಮೀರದಲ್ಲಿ ನಡೆದ ಆಯ್ದ ಹತ್ಯೆಗಳ ಬಗ್ಗೆ ಬಿಜೆಪಿ ತೀವ್ರ ಕಳವಳ ವ್ಯಕ್ತಪಡಿಸಿದ್ದು, ತಮ್ಮ ಕಾರ್ಯಕರ್ತರನ್ನು ಗುರಿಯಾಗಿರಿಸಿಕೊಳ್ಳಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕೌಲ್ ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಈ ಆಯ್ದ ಹತ್ಯೆಗಳಲ್ಲಿ, ಇಲ್ಲಿ ಬಿಜೆಪಿ ನಾಯಕರು, ಕಾಶ್ಮೀರೇತರರು ಅಥವಾ ಮುಸ್ಲಿಮೇತರರನ್ನು ಕೊಲ್ಲಲಾಗುತ್ತಿದೆ. ಅಲ್ಲದೆ ಕೆಲವು ಮುಸ್ಲಿಮರನ್ನೂ ಸಹ ಗುರಿಯಾಗಿಸಲಾಗುತ್ತಿದೆ. ನಾವು ಪ್ರತಿಯೊಂದು ಆಯ್ದ ಹತ್ಯೆಗೆ ವಿರುದ್ಧವಾಗಿದ್ದೇವೆ ಮತ್ತು ಯಾವುದೇ ಧರ್ಮ ಅದನ್ನು ಅನುಮತಿಸುವುದಿಲ್ಲ” ಎಂದು ಕೌಲ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿಯೇ ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸುವುದಾಗಿ ಹೇಳಿದ್ದಾರೆ ಮತ್ತು ಬಿಜೆಪಿ ಕೂಡ ಅದನ್ನು ಬೆಂಬಲಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
"ಕಣಿವೆಯಲ್ಲಿ ಪರಿಸ್ಥಿತಿ ಸುಧಾರಿಸಿದರೆ ಆಯ್ದ ಹತ್ಯೆಗಳು ಕೊನೆಗೊಳ್ಳುತ್ತವೆ ಮತ್ತು ಸಾಮಾನ್ಯ ಜನರು ಮುಕ್ತವಾಗಿ ಸಂಚರಿಸಲು ಸಾಧ್ಯವಾಗುತ್ತದೆ, ನಂತರ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಲಾಗುತ್ತದೆ" ಎಂದು ಅವರು ಹೇಳಿದ್ದಾರೆ.