ಮುಂಬೈ: ಬಾಲಿವುಡ್ ಮೆಗಾ ಸ್ಟಾರ್ ಅಮಿತಾಭ್ ಬಚ್ಚನ್ ಪಾನ್ ಮಸಾಲಾ ಬ್ರಾಂಡ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಕಳೆದ ತಿಂಗಳು ಪಾನ್ ಮಸಾಲಾ ಬ್ರ್ಯಾಂಡ್ ನೊಂದಿಗಿನ ಒಪ್ಪಂದ ರದ್ದುಪಡಿಸಿಕೊಂಡು, ಅದಕ್ಕಾಗಿ ಪಡೆದುಕೊಂಡಿದ್ದ ಹಣವನ್ನು ಹಿಂದಿರುಗಿಸಿದ್ದೇನೆ ಎಂದು ಅಮಿತಾಭ್ ಬಚ್ಚನ್ ಹೇಳಿದ್ದರು. ಆದರೂ, ಈಗಲೂ ತಾವು ಪ್ರಚಾರ ಮಾಡುತ್ತಿರುವ ರೀತಿ ಜಾಹೀರಾತು ಪ್ರಸಾರವಾಗುತ್ತಿರುವ ಕಾರಣ ಅಮಿತಾಬ್, ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಈ ಜಾಹೀರಾತುಗಳ ಪ್ರಸಾರ ರದ್ದುಗೊಳಿಸುವಂತೆ 'ಕಮಲಾ ಪಸಂದ್' ಪಾನ್ ಮಸಾಲಾ ಬ್ರಾಂಡ್‌ಗೆ ಬಿಗ್ ಬಿ ಕಚೇರಿ ಲೀಗಲ್ ನೋಟಿಸ್ ರವಾನಿಸಿದೆ. ಇನ್ನು ಮುಂದೆ ಪಾನ್ ಮಸಾಲ ಬ್ರಾಂಡ್ ಜಾಹೀರಾತುಗಳೊಂದಿಗೆ ಅಮಿತಾಭ್ ಬಚ್ಚನ್ ಯಾವುದೇ ಸಂಬಂಧ ಹೊಂದಿಲ್ಲ ಎಂದು ಅಕ್ಟೋಬರ್‌ನಲ್ಲಿ ಅಮಿತಾಭ್ ಬಚ್ಚನ್ ಅವರ ಕಚೇರಿಯು ಒಂದು ಪೋಸ್ಟ್ ಮಾಡಿತ್ತು.
ಅಮಿತಾಭ್, 'ಪಾನ್ ಮಸಾಲಾ ಬ್ರ್ಯಾಂಡ್ ಜಾಹೀರಾತು ಪ್ರಸಾರ ಮಾಡಿದ ಕೆಲವು ದಿನಗಳ ನಂತರ ಅದರಿಂದ ಹಿಂದೆ ಸರಿದಿದ್ದಾರೆ. ಏಕೆಂದರೆ ಒಪ್ಪಂದ ಮಾಡಿಕೊಂಡಾಗ, ಅದು ಬಾಡಿಗೆ ಜಾಹೀರಾತು ಅಡಿಯಲ್ಲಿ ಬರುತ್ತದೆಯೇ ಎಂದು ತಿಳಿದಿರಲಿಲ್ಲ, ಈ ಬ್ರ್ಯಾಂಡ್‌ನೊಂದಿಗಿನ ಒಪ್ಪಂದವನ್ನು ರದ್ದುಪಡಿಸಿಕೊಂಡು, ಪ್ರಚಾರಕ್ಕೆ ತೆಗೆದುಕೊಂಡ ಹಣವನ್ನೂ ವಾಪಸ್ ನೀಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಈ ಪಾನ್ ಮಸಾಲಾ ಬ್ರಾಂಡ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಪರಿಣಾಮ 79 ವರ್ಷದ ಅಮಿತಾಭ್ ಬಚ್ಚನ್ ಹಲವಾರು ಹಿನ್ನಡೆ ಎದುರಿಸಿದ್ದಾರೆ. ಅನೇಕ ಅಭಿಮಾನಿಗಳು ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿ, ಅಮಿತಾಬ್ ಇದಕ್ಕೆ ಹೇಗೆ ಒಪ್ಪಿಗೆ ಸೂಚಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.