ತಿರುವನಂತಪುರ: ವೇತನ ಪರಿಷ್ಕರಣೆ ಜಾರಿಯಾಗದಿರುವುದನ್ನು ವಿರೋಧಿಸಿ ಕೆಎಸ್‌ಆರ್‌ಟಿಸಿ ನೌಕರರು ರಾಜ್ಯಾದ್ಯಂತ ಮುಷ್ಕರ ಆರಂಭಿಸಿರುವರು. ಮಾನ್ಯತೆ ಪಡೆದ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ. ಎಡಪಕ್ಷಗಳ ಪರವಾದ ಒಕ್ಕೂಟ ಮತ್ತು ಬಿಎಂಎಸ್ ಶುಕ್ರವಾರದಿಂದ 48 ಗಂಟೆಗಳ ಮುಷ್ಕರಕ್ಕೆ ಮತ್ತು ಶನಿವಾರ ಕಾಂಗ್ರೆಸ್ ಪರ ಒಕ್ಕೂಟವು ಮುಷ್ಕರ ಘೋಷಿಸಿವೆ. ದೂರ ಪ್ರಯಾಣ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ. ನಿನ್ನೆ ಸಾರಿಗೆ ಸಚಿವ ಆಂಟೋನಿ ರಾಜು ನೇತೃತ್ವದಲ್ಲಿ ಮಾತುಕತೆ ನಡೆದಿದ್ದರೂ ಸಫಲವಾಗಲಿಲ್ಲ. ಮುಂದಿನ ವೇತನ ಪರಿಷ್ಕರಣೆ ಕುರಿತು ಮಾತುಕತೆ ನಡೆಸಲು ಸರಕಾರ ಇನ್ನಷ್ಟು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸಲು ಕಾರ್ಮಿಕ ಸಂಘಟನೆಗಳು ನಿರ್ಧರಿಸಿವೆ. ಮುಷ್ಕರದಿಂದ ಹಿಂದೆ ಸರಿಯುವ ಬೇಡಿಕೆಯನ್ನು ಮೂರೂ ಒಕ್ಕೂಟಗಳು ತಿರಸ್ಕರಿಸಿವೆ.
ಕಳೆದ ಒಂಬತ್ತು ವರ್ಷಗಳಿಂದ ಕೆಎಸ್‌ಆರ್‌ಟಿಸಿ ವೇತನ ಪರಿಷ್ಕರಣೆ ಜಾರಿ ಮಾಡಿಲ್ಲ ಎಂಬುದು ಕಾರ್ಮಿಕ ಸಂಘಟನೆಗಳ ಆರೋಪ. 2016ರ ಫೆಬ್ರುವರಿಯಲ್ಲಿ ಪೂರ್ಣಗೊಂಡಿರುವ ವೇತನ ಪರಿಷ್ಕರಣೆ ಕೇವಲ ಮಾತಿಗಷ್ಟೇ ಸೀಮಿತ ಎಂದು ಕಾರ್ಮಿಕ ಸಂಘಟನೆಗಳು ಹೇಳುತ್ತಿವೆ. ಜೂನ್‌ನಲ್ಲಿ ವೇತನ ಪರಿಷ್ಕರಣೆ ಜಾರಿಗೆ ತರುವುದಾಗಿ ಮುಖ್ಯಮಂತ್ರಿಗಳು ನೀಡಿದ್ದ ಭರವಸೆಯೂ ಈಡೇರಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ. ಏತನ್ಮಧ್ಯೆ, ಕೆಎಸ್ಆರ್ಟಿಸಿ ಮುಷ್ಕರವನ್ನು ಎದುರಿಸಲು ಸರ್ಕಾರ ಡೈಸನ್ ನ್ನು ಘೋಷಿಸಿತು. ಇದರ ಭಾಗವಾಗಿ ಇಂದು ಮತ್ತು ನಾಳೆ ಕರ್ತವ್ಯಕ್ಕೆ ಬಾರದವರ ಸಂಬಳವನ್ನು ಕಡಿತಗೊಳಿಸಲಾಗುತ್ತದೆ.
ಆದರೆ, ನೌಕರರ ಬೇಡಿಕೆಗಳನ್ನು ತಿರಸ್ಕರಿಸಿಲ್ಲ ಎಂದು ಸಾರಿಗೆ ಸಚಿವ ಆಂಟನಿ ರಾಜು ಹೇಳಿದ್ದಾರೆ. ವೇತನ ಪರಿಷ್ಕರಣೆಯಿಂದ ಸರಕಾರಕ್ಕೆ ತಿಂಗಳಿಗೆ 30 ಕೋಟಿ ಹೆಚ್ಚುವರಿ ಹೊರೆಯಾಗಲಿದ್ದು, ವಿಳಂಬವಾದಾಗ ಮುಷ್ಕರ ಘೋಷಣೆ ಮಾಡುವುದು ಸರಿಯಲ್ಲ ಎಂದು ಸಾರಿಗೆ ಸಚಿವರು ಹೇಳಿದರು. ಮುಷ್ಕರದ ಹಿನ್ನೆಲೆಯಲ್ಲಿ ಕೇರಳ ವಿಶ್ವವಿದ್ಯಾನಿಲಯ ಇಂದು ನಡೆಯಬೇಕಿದ್ದ ಎಲ್ಲಾ ಥಿಯರಿ, ಪ್ರಾಯೋಗಿಕ ಮತ್ತು ಪ್ರವೇಶ ಪರೀಕ್ಷೆಗಳನ್ನು ಮುಂದೂಡಿದೆ.