ವಿಟ್ಲ :ಕುಂದಾಪುರದ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನಿಗೆ ಇನ್ನು ಎರಡ್ಮೂರು ದಿನದಲ್ಲಿ ವಿಟ್ಲದ ಹುಡುಗಿ ಜತೆ ಮದುವೆ ನಿಶ್ಚಿತಾರ್ಥ ಮಾಡಲು ಸಕಲ ಸಿದ್ಧತೆ ನಡೆದಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಭಾನುವಾರ ಯುವಕನ ಮನೆಯಂಗಳಕ್ಕೆ ಕುಂದಾಪುರದಿಂದ ವಧು ದಿಬ್ಬಣ ಬಂದು ನಿಂತಿತ್ತು.
ಇಂತಹ ದುರ್ಘಟನೆ ಪಡುವನ್ನೂರು ಗ್ರಾಮದ ಸುಳ್ಯಪದವು ಸಮೀಪ ಭಾನುವಾರ ಸಂಭವಿಸಿದೆ. ಪ್ರೇಮದ ಇಕ್ಕಟ್ಟಿಗೆ ಸಿಲುಕಿ ಪ್ರಾಣಬಿಟ್ಟವ ಶಬರಿನಗರ ನಿವಾಸಿ ರವಿರಾಜ್. 31 ವರ್ಷದ ರವಿರಾಜ್, ಕುಂದಾಪುರದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರವನ್ನ ತನ್ನ ಮನೆಯವರಿಗೆ ತಿಳಿಸದೆ ಗುಟ್ಟಾಗಿ ಇಟ್ಟಿದ್ದ. ಈ ನಡುವೆ ರವಿರಾಜ್ಗೆ ಮನೆಯವರು ವಿಟ್ಲದ ಯುವತಿಯೊಂದಿಗೆ ವಿವಾಹ ಸಂಬಂಧ ಮಾತುಕತೆ ಬೆಳೆಸಿ ನ.25ರಂದು ವಿವಾಹ ನಿಶ್ಚಿತಾರ್ಥ ದಿನಾಂಕ ನಿಗದಿಪಡಿಸಿ ಸಿದ್ಧತೆ ನಡೆಸಿದ್ದರು. ನ.20ರ ಸಂಜೆ ಸ್ನೇಹಿತನೊಬ್ಬನ ಮನೆಗೆ ಹೋಗುತ್ತಿರುವುದಾಗಿ ಮನೆಯಲ್ಲಿ ಹೇಳಿ ರವಿರಾಜ್ ಹೊರ ಹೋಗಿದ್ದ. ರಾತ್ರಿ ಮನೆಗೆ ಬಂದಿಲ್ಲ ಏಕೆ ಎಂದು ಕುಟುಂಬಸ್ಥರು ಕರೆ ಮಾಡಿದಾಗ ಸ್ನೇಹಿತನ ಮನೆಯಲ್ಲಿರುವುದಾಗಿ ತಿಳಿಸಿದ್ದ. ಮರುದಿನ(ನ.21) ಬೆಳಗ್ಗೆ ಕುಂದಾಪುರದ ಯುವತಿಯೊಬ್ಬಳ ಕಡೆಯವರು ಏಕಾಏಕಿ ವಿವಾಹ ದಿಬ್ಬಣದೊಂದಿಗೆ ರವಿರಾಜ್ ಮನೆಗೆ ಮೂರು ವಾಹನಗಳಲ್ಲಿ ಬಂದಿದ್ದರು. ರವಿರಾಜ್ ಮನೆಯಲ್ಲಿರಲಿಲ್ಲ. ಏಕಾಏಕಿ ವಿವಾಹ ದಿಬ್ಬಣ ಬಂದಿದ್ದ ಕಾರಣ ಈ ವಿಚಾರದಲ್ಲಿ ಮನೆಯವರು ಚಿಂತೆಗೀಡಾಗಿದ್ದರು.
ಈ ಬಗ್ಗೆ ವಿಚಾರಿಸಲು ರವಿರಾಜ್ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಎಲ್ಲ ವಿದ್ಯಮಾನಗಳು ನಡೆದ ಬೆನ್ನಲ್ಲೇ ರವಿರಾಜ್, ಈಶ್ವರಮಂಗಲ ಸಮೀಪದ ಮುಂಡ್ಯದಲ್ಲಿ ನಿರ್ಮಾಣ ಹಂತದ ಸಹೋದರನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿತ್ತು. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ಯುವತಿ ಕಡೆಯವರು ವಿವಾಹ ಕಾರ್ಯ ನಡೆಸಲು ಭಾನುವಾರ ತನ್ನ ಮನೆಗೆ ದಿಬ್ಬಣದೊಂದಿಗೆ ಬರಲು ತೀರ್ಮಾನಿಸಿರುವ ವಿಚಾರ ಅರಿತ ಯುವಕ, ಇಕ್ಕಟ್ಟಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಅತ್ತ ಮದುವೆ ಕನಸು ಕಂಡಿದ್ದ ಕುಂದಾಪುರ ಮತ್ತು ವಿಟ್ಲದ ಯುವತಿಯರಿಬ್ಬರಗೂ ರವಿರಾಜ್ನ ಸಾವು ನೋವುಂಟು ಮಾಡಿದೆ. ಅತ್ತ ರಾವಿರಾಜ್ನ ಪಾಲಕರು, ಅಯ್ಯೋ ಮಗನೇ ಎಲ್ಲವನ್ನೂ ಬಚ್ಚಿಟ್ಟು ನಮ್ಮನ್ನು ಬಿಟ್ಟು ಹೋಗಿಬಿಟ್ಟಲ್ಲೋ ಎಂದು ಕಣ್ಣೀರಿಡುತ್ತಿದ್ದಾರೆ.