ಗುವಾಹಟಿ: ಯುಪಿಎ-2 ಸರ್ಕಾರದ ವಿರುದ್ಧ ಷಡ್ಯಂತ್ರ ರೂಪಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಜಿ ಕ್ಷಮೆ ಕೋರಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಮೋದಿ ಹಾಗೂ ಸಿಎಜಿ ವಿನೋದ್ ರಾಯ್ 2 ಜಿ ಹಗರಣದ ಆರೋಪ ಹೊರಿಸಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರ್ಕಾರದ ವಿರುದ್ಧ ಷಡ್ಯಂತ್ರ ರೂಪಿಸಿದ್ದರು ಎಂದು ಕಾಂಗ್ರೆಸ್ ಹೇಳಿದ್ದರು.
2 ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಸಿಎಜಿ ವರದಿಯಲ್ಲಿ ಸಿಂಗ್ ಅವರ ಹೆಸರನ್ನು ಉಲ್ಲೇಖಿಸದೇ ಇರುವುದಕ್ಕೆ ತಮ್ಮ ವಿರುದ್ಧ ಒತ್ತಡ ಹೇರಿದ್ದ ಸಂಸದರ ಪೈಕಿ ಸಂಜಯ್ ನಿರುಪಮ್ ಅವರ ಹೆಸರನ್ನು ತಪ್ಪಾಗಿ ಉಲ್ಲೇಖಿಸಿದ್ದರಿಂದ ಮಾಜಿ ಸಿಎಜಿ ರಾಯ್ ಸಂಜಯ್ ನಿರುಪಮ್ ಬಳಿ ಕ್ಷಮೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುಪಿಎ ಸರ್ಕಾರದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದು, ದೇಶಕ್ಕೆ ಸತ್ಯ ತಿಳಿಯಬೇಕಿದೆ. ಬಿಜೆಪಿ ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿರುದ್ಧ ಷಡ್ಯಂತ್ರ ರೂಪಿಸಿತ್ತು ಹಾಗೂ ವಿನೋದ್ ರಾಯ್ ಅದರಲ್ಲಿ ಭಾಗಿಯಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ, ವಿನೋದ್ ರಾಯ್, ಇಬ್ಬರೂ ದೇಶದ ಕ್ಷಮೆ ಕೋರಬೇಕು ಹಾಗೂ ಷಡ್ಯಂತ್ರದಲ್ಲಿ ಭಾಗಿಯಾಗಿದ್ದೇವೆ ಎಂದು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್ ಆಗ್ರಹಿಸಿದ್ದಾರೆ.