ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸುತ್ತಿದ್ದಂತೆ ಸುಪ್ರೀಂ ಕೋರ್ಟ್ ನೇಮಿಸಿರುವ ತಂಡದ ಸದಸ್ಯರೊಬ್ಬರು ವರದಿಯನ್ನು ಸಾರ್ವಜನಿಕರ ಮುಂದೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ ಈಗಾಗಲೇ ಕಾಯ್ದೆಗೆ ಸಂಬಂಧಿಸಿದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.ಇದೀಗ ಕೇಂದ್ರ ಸರ್ಕಾರವೇ ಕಾಯ್ದೆಯನ್ನು ಹಿಂಪಡೆಯುವುದರಿಂದ ಈ ವರದಿಯ ಉದ್ದೇಶವೇನೂ ಇಲ್ಲದಾಗಿದೆ, ಸುಪ್ರೀಂ ಕೋರ್ಟ್ ವರದಿ ಬಿಡುಗಡೆ ಮಾಡದಿದ್ದರೆ ನಾವೇ ಸಾರ್ವಜನಿಕರ ಮುಂದಿಡುತ್ತೇವೆ ಎಂದಿದ್ದಾರೆ.
ಸಮಿತಿಯ ವರದಿ ರೈತರ ಪರವಾಗಿದ್ದಿತ್ತು. ಮುಂದಿನ ವಾರ ವರದಿಯನ್ನು ಬಿಡುಗಡೆ ಮಾಡುವುದಾಗಿ ಶೆಟ್ಕರಿ ಸಂಘಟನೆ ಅಧ್ಯಕ್ಷ ಅನಿಲ್ ಜೆ ಘನ್ವಾಟ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ಸಾಧಕ-ಬಾಧಕಗಳ ಬಗ್ಗೆ ಸಂಬಂಧಪಟ್ಟವರೊಂದಿಗೆ ಸಮಾಲೋಚನೆ ನಡೆಸಿ ಅಧ್ಯಯನ ಮಾಡಿ ಮೂವರು ಸದಸ್ಯರನ್ನೊಳಗೊಂಡ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಮಿತಿ ಕಳೆದ ಮಾರ್ಚ್ 19ರಂದು ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿತ್ತು.
ಸಮಿತಿಯ ವರದಿಯನ್ನು ಬಿಡುಗಡೆ ಮಾಡಿದರೆ ರೈತರಿಗೆ ಮನದಟ್ಟಾಗುತ್ತದೆ, ಸರ್ಕಾರ ವಿರುದ್ಧ ಮಾಡುತ್ತಿರುವ ಪ್ರತಿಭಟನೆ ನಿಲ್ಲುತ್ತದೆ ಎಂದು ಘನವಟ್ ಕಳೆದ ಸೆಪ್ಟೆಂಬರ್ 1 ರಂದು ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರದ ಮೂಲಕ ವಿನಂತಿ ಮಾಡಿಕೊಂಡಿದ್ದರು. ಆದರೆ ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ.
ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಘನವಟ್, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದರೆ ನಾವು ಸಲ್ಲಿಸಿರುವ ವರದಿಗೆ ಯಾವುದೇ ಅರ್ಥವಿಲ್ಲ. ಸುಪ್ರೀಂ ಕೋರ್ಟ್ ಜನರಿಗೆ ನಮ್ಮ ವರದಿಯನ್ನು ಬಿಡುಗಡೆ ಮಾಡದಿದ್ದರೆ ನಾನು ಬಹಿರಂಗಪಡಿಸುತ್ತೇನೆ ಎಂದಿರುವ ಅವರು ವರದಿ ತಯಾರಿಸಲು ಮೂರು ತಿಂಗಳು ತೆಗೆದುಕೊಂಡಿದ್ದೆವು ಎನ್ನುತ್ತಾರೆ.
ರೈತರ ಹಿತದೃಷ್ಟಿಯಿಂದ ಸಮಿತಿಗಳ ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಮುಂದಾಗುತ್ತೇನೆ. ಸಮಿತಿ ಮಾಡಿರುವ ಶಿಫಾರಸ್ಸುಗಳನ್ನು ರೈತರು, ಪತ್ರಿಕೆಗಳು ಮತ್ತು ಸರಕಾರ ಅರಿಯಬೇಕು,'' ಎಂದು ಹೇಳಿದ ಅವರು, ವರದಿಯು ರೈತರ ಪರವಾಗಿದೆ. ಕೃಷಿಗೆ ಸಂಬಂಧಿಸಿದ ಭವಿಷ್ಯದ ಕಾನೂನುಗಳನ್ನು ರೂಪಿಸಲು ವರದಿಯು ಉತ್ತಮ ಉಲ್ಲೇಖವಾಗಲಿದೆ ಎಂದು ಹೇಳಿದ್ದಾರೆ.