ಕೊಲ್ಲಂ: ವಿವಾಹ ಮಂಟಪದಲ್ಲಿ ನಡೆದ ವಿವಾದದ ಹಿನ್ನೆಲೆಯಲ್ಲಿ ಮದುಮಗ ಕಟ್ಟಿದ್ದ ತಾಳಿಯನ್ನು ವಾಪಸ್ ನೀಡಿದ್ದು ಸುದ್ದಿಯಾಗಿತ್ತು. ನಿನ್ನೆ ಕೊಲ್ಲಂನ ಅಲ್ತಾರಮೂಡು ಸಭಾಂಗಣದಲ್ಲಿ ಈ ಘಟನೆ ನಡೆದಿತ್ತು. ಇದೀಗ ಘಟನೆಯ ಹೆಚ್ಚಿನ ವಿವರಗಳು ಹೊರಬಿದ್ದಿವೆ. ವರ ಮತಾಂತರಗೊಂಡಿದ್ದು ತಿಳಿಯದೆ ವಧುವಿನ ಸಂಬಂಧಿಕರು ಮದುವೆ ಸ್ಥಳಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಅಲ್ತಾರಮೂಡಿನ ಹುಡುಗಿ ಹಾಗೂ ಕಿಲಿಮಾನೂರು ಪುಲಿಮಠದ ಯುವಕನ ನಡುವೆ ಮದುವೆ ನಿಶ್ಚಯವಾಗಿತ್ತು. ಮದುವೆಯನ್ನು ಮನೆಯವರು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಆದರೆ ಯುವಕ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ವಧುವಿನ ಮನೆಯವರಿಗೆ ಈ ವಿಷಯವನ್ನು ಮುಚ್ಚಿಟ್ಟಿದ್ದ. ಇದೇ ಕಾರಣಕ್ಕೆ ವಿವಾಹ ಮಂಟಪದಲ್ಲಿ ವರ ಶೂ ಬದಲಾಯಿಸಲು ನಿರಾಕರಿಸಿ ಕೈದೀಪ ಆರತಿ ಮಾಡಬೇಡಿ ಎಂದು ಹೇಳಿದ್ದಾನೆ ಎಂದು ಇದೀಗ ಬಯಲಾಗಿದೆ.
ವರನ ಒತ್ತಾಯದ ಮೇರೆಗೆ ಯುವತಿಯ ಮನೆಯವರು ಮಂಟಪದ ಹೊರಗೆ ವಿವಾಹ ನೆರವೇರಿಸಿದರು. ಬಳಿಕ ಗಂಟುಮೂಟೆ ಕಟ್ಟಿಕೊಂಡು ಹಿಂತಿರುಗುದಾಗ ವಧುವಿನ ಸಂಬಂಧಿಕರು ಮತ್ತು ವರನ ನಡುವೆ ಮತ್ತೆ ವಾಗ್ವಾದ ನಡೆದಿದೆ. ವಿವಾದ ವಿಕೋಪಕ್ಕೆ ಹೋಗುತ್ತಿದ್ದಂತೆ ವಧುವಿನ ಸಂಬಂಧಿಕರು ಪೋಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಸಂಬಂಧಿಕರ ಸೂಚನೆ ಮೇರೆಗೆ ವಧು ಮಂಗಳಸೂತ್ರವನ್ನು ಯುವಕನಿಗೆ ಹಿಂತಿರುಗಿಸಿದ್ದಾಳೆ.
ಘಟನೆಯ ನಂತರ ಅದೇ ಸ್ಥಳದಲ್ಲಿ ಯುವತಿ ಸಂಬಂಧಿಕನಾದ ಯುವಕನೊಬ್ಬನೊಂದಿಗೆ ವಿವಾಹಿತಳಾದಳು. ಘಟನೆ ನಡೆದ ಸಂದರ್ಭದಲ್ಲಿ ವರನ ಮತಾಂತರದ ವಿಚಾರ ವಧುವಿನ ಸಂಬಂಧಿಕರಿಗೆ ತಿಳಿದಿರಲಿಲ್ಲ. ವರ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವುದು ಪೋಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನು ಯುವಕನ ಮನೆಯವರು ಖಚಿತಪಡಿಸಿದ್ದಾರೆ.