ನವದೆಹಲಿ: ಶೀಘ್ರದಲ್ಲೇ ಕೆಲವು ರೈಲುಗಳಲ್ಲಿ ಪ್ರಯಾಣಿಕರು 'ಪ್ರಮಾಣೀಕೃತ ಸಸ್ಯಾಹಾರಿ ಆಹಾರ' ವನ್ನು ಪಡೆಯಲು ಸಾಧ್ಯವಾಗಲಿದೆ. ಹೌದು, IRCTC ಯ ಕೆಲವು ರೈಲುಗಳಲ್ಲಿ ಇನ್ನು ಮುಂದೆ 'ಪ್ರಮಾಣೀಕೃತ ಸಸ್ಯಾಹಾರಿ ಆಹಾರ' ಲಭ್ಯವಾಗಲಿದೆ.
ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾದ ಜೊತೆ ಐಆರ್‌ಸಿಟಿಸಿ ಸೋಮವಾರ ಕೈಜೋಡಿಸಿದೆ. ಈ ಮೂಲಕ ಇನ್ನು ಮುಂದೆ ಐಆರ್‌ಸಿಟಿಸಿ ಯ ರೈಲುಗಳಿಗೆ ಸಸ್ಯಾಹಾರವನ್ನು ಸಿದ್ಧಪಡಿಸುವ ಅಡುಗೆ ಮನೆಯಲ್ಲಿ ಈ ಸಾತ್ವಿಕ್ ಕೌನ್ಸಿಲ್ ಆಫ್ ಇಂಡಿಯಾದ ಪ್ರತಿನಿಧಿಗಳು ಹಾಜರಿದ್ದು, ಅಡುಗೆ ಮಾಡುವುದು, ಸಾಗಾಟ ಹಾಗೂ ಸಂಗ್ರಹ ಪ್ರಕ್ರಿಯೆಯನ್ನು ಪರಿಶೀಲಿಸಿ ಪ್ರಮಾಣೀಕರಣ ನೀಡಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಧಾರ್ಮಿಕ ಸ್ಥಳಗಳಿಗೆ ಹೋಗುವ ರೈಲುಗಳಲ್ಲಿ ಈ ಆಹಾರ ಲಭ್ಯವಾಗಲಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
"ಸಸ್ಯಾಹಾರವನ್ನು ಅದು ಸಸ್ಯಾಹಾರ ಎಂದು ನೀಡುವುದು ಅಲ್ಲ. ಅದು ಸಾತ್ವಿಕವಾದ ಆಹಾರ ಎಂದು ಪ್ರಮಾಣೀಕರಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರ್ಮಿಕ ಕೇಂದ್ರಗಳಿಗೆ ಸಂಚಾರ ಮಾಡುವ ಈ ಸಾತ್ವಿಕ ಆಹಾರವು ವಂದೇ ಭಾರತ್ ಮಾತ್ರವಲ್ಲದೇ ಬೇರೆ ಒಟ್ಟು 18 ರೈಲುಗಳಲ್ಲಿ ಇರಲಿದೆ.
ಯಾಕಾಗಿ ಈ ಸಾತ್ವಿಕ ಪ್ರಮಾಣ ಪತ್ರ? "ಸಾತ್ವಿಕ ಪ್ರಮಾಣ ಪತ್ರವು ಸಸ್ಯಾಹಾರವನ್ನು ಸಿದ್ಧ ಪಡಿಸುವ ಪ್ರಕ್ರಿಯೆಗೆ ನೀಡುವ ಪ್ರಮಾಣ ಪತ್ರವಾಗಿದೆ. ಯಾವುದೇ ಮಾಂಸಹಾರವಿಲ್ಲದ ವಾತಾವರಣದಲ್ಲಿಯೇ ಸಸ್ಯಾಹಾರವನ್ನು ಸಿದ್ಧಪಡಿಸಿದೆಯೇ ಎಂದು ಖಚಿತ ಪಡಿಸಿಕೊಂಡು ಆಹಾರವನ್ನು ಪಡೆದ ಜನರು ಹಲವಾರು ಮಂದಿ ಇದ್ದಾರೆ. ಜನರಲ್ಲಿ ಈ ಆಹಾರವು ಸಸ್ಯಾಹಾರ ಎಂದು ವಿಶ್ವಾಸ ನೀಡುವ ನಿಟ್ಟಿನಲ್ಲಿ ಈ ಸಾತ್ವಿಕ ಆಹಾರದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ," ಎಂದು ಐಆರ್‌ಸಿಟಿಸಿ ವಕ್ತಾರ ಆನಂದ್ ಜಾ ತಿಳಿಸಿದ್ದಾರೆ. ಹಾಗೆಯೇ, "ಮಾಂಸಾಹಾರಕ್ಕೆ ಯಾವುದೇ ನಿರ್ಬಂಧ ಇದೆ ಎಂದು ಇದರ ಅರ್ಥವಲ್ಲ," ಎಂದು ಕೂಡಾ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.ಎಸ್‌ಸಿಐ ಪತ್ರಿಕಾ ಹೇಳಿಕೆಯನ್ನು ಹೊರಡಿಸಿದ್ದು, ಇದರಲ್ಲಿ ಎನ್‌ಜಿಒ ಸಾತ್ವಿಕ್ ಪ್ರಮಾಣೀಕರಣ ಯೋಜನೆಯನ್ನು ಪ್ರಾರಂಭಿಸಿದೆ ಎಂದು ತಿಳಿಸಿದೆ. "ಇದು ಮೊದಲು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಆರಂಭವಾಗಲಿದೆ. ಹಾಗೆಯೇ 18 ರೈಲುಗಳಲ್ಲಿ ಆರಂಭವಾಗಲಿದೆ. ಮುಖ್ಯವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ರೈಲುಗಳಲ್ಲಿ ಈ ಸಾತ್ವಿಕ ಆಹಾರ ಲಭ್ಯವಾಗಲಿದೆ. "ಈ ಆಹಾರವು ನಿಜಕ್ಕೂ ಸಸ್ಯಾಹಾರವೇ ಆಗಿದೆ. ಸಸ್ಯಾಹಾರಿಗಳು ಯಾವುದೇ ಅನುಮಾನವಿಲ್ಲದೇ ಈ ಆಹಾರವನ್ನು ಸೇವನೆ ಮಾಡಬಹುದು. ಈ ಆಹಾರವನ್ನು ಸಿದ್ಧಪಡಿಸಿದ ಅಡುಗೆ ಮನೆಯಲ್ಲಿ ಎಲ್ಲಾ ಸಸ್ಯಾಹಾರ ವಸ್ತುಗಳನ್ನೇ ಬಳಸಲಾಗಿದೆ ಎಂಬುವುದನ್ನು ಖಚಿತ ಪಡಿಸುವ ನಿಟ್ಟಿನಲ್ಲಿ ಈ ಸಾತ್ವಿಕ ಪ್ರಮಾಣಪತ್ರವನ್ನು ನೀಡಲಾಗುತ್ತದೆ," ಎಂದು ಕೂಡಾ ಪತ್ರಿಕಾ ಪ್ರಕಟಣೆಯಲ್ಲಿ ಸೇರಿಸಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಸಿಐ ಸ್ಥಾಪಕ ಅಭಿಷೇಕ್ ಬಿಸ್ವಾಸ್, "ಪ್ರವಾಸೋದ್ಯಮದಲ್ಲಿ ಸಸ್ಯಾಹಾರಿಗಳು ಅಧಿಕ ಪ್ರಭಾವ ಬೀರುತ್ತಾರೆ. ಸಸ್ಯಾಹಾರಿಗಳು ಪ್ರವಾಸವನ್ನು ಅಧಿಕವಾಗಿ ಮಾಡುತ್ತಿದ್ದಾರೆ. ಜಾಗತಿಕ ಪ್ರಯಾಣ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿದೆ. ಹೆಚ್ಚಿನ ಜನರು ಪ್ರಯಾಣ ಮಾಡುವ ಸಂದರ್ಭದಲ್ಲಿ ಸಸ್ಯಾಹಾರಿ ಆಹಾರ ಹಾಗೂ ಪರಿಸರಕ್ಕೆ ಆದ್ಯತೆ ನೀಡುತ್ತಾರೆ. ಆದ್ದರಿಂದ ರೆಸ್ಟೋರೆಂಟ್‌ಗಳಲ್ಲಿ ಪ್ರಮಾಣೀಕೃತ ಸಸ್ಯಾಹಾರಿ ಆಹಾರವನ್ನು ಅಭಿವೃದ್ಧಿಪಡಿಸುವುದು ಅತ್ಯಗತ್ಯ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.