ನವದೆಹಲಿ: ಬಹಳ ದಿನಗಳಿಂದ ಕಾಯುತ್ತಿದ್ದ ಭಾರತದ 'ಕೋವ್ಯಾಕ್ಸಿನ್' ಕೋವಿಡ್ ಲಸಿಕೆಗೆ ಕೊನೆಗೂ ವಿಶ್ವ ಆರೋಗ್ಯ ಸಂಸ್ಥೆ (WHO) ಮನ್ನಣೆ ನೀಡಿದ್ದು, ತುರ್ತು ಬಳಕೆಗೆ ಅನುಮೋದನೆ ನೀಡಿದೆ.
ಭಾರತ್ ಬಯೋಟೆಕ್(Bharat Biotech) ನ ಕೊವ್ಯಾಕ್ಸಿನ್ (Covaxin) ಲಸಿಕೆಯನ್ನು ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಕೊನೆಗೂ ಅನುಮೋದಿಸಿದೆ. ಕೋವ್ಯಾಕ್ಸಿನ್ ಲಸಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ತನ್ನ ಲಸಿಕೆಗಳ ತುರ್ತು ಬಳಕೆಯ ಪಟ್ಟಿ (emergency use listing - EUL)ಗೆ ಅಧಿಕೃತವಾಗಿ ಸೇರ್ಪಡೆ ಮಾಡಿದೆ. ಈ ಮೂಲಕ ಭಾರತದ ಕೋವ್ಯಾಕ್ಸಿನ್ ಲಸಿಕೆಗೆ ಜಾಗತಿಕ ಮನ್ನಣೆ ದೊರೆತಿದೆ.
ಇತ್ತೀಚೆಗಷ್ಟೇ ಭಾರತ್ ಬಯೋಟೆಕ್‌ನ ಕೋವಿಡ್ ವಿರೋಧಿ ಲಸಿಕೆ ಕೋವಾಕ್ಸಿನ್‌ಗೆ ತುರ್ತು ಬಳಕೆಯ ಅಧಿಕಾರವನ್ನು ನೀಡುವ ಕುರಿತು ನಿರ್ಧರಿಸಲು ತಾಂತ್ರಿಕ ಸಲಹಾ ಗುಂಪು (TAG), ವಿಶ್ವ ಆರೋಗ್ಯ ಸಂಸ್ಥೆಯ (WHO) ಸ್ವತಂತ್ರ ಸಲಹಾ ಸಮಿತಿಯು ಸಭೆ ನಡೆಸಿತ್ತು. ಈ ಸಭೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆಗಾಗಿ ಅನುಮತಿಸುವ ಕುರಿತಂತೆ ಚರ್ಚೆ ನಡೆಸಲಾಗಿತ್ತು.
ಲಸಿಕೆಯ ಜಾಗತಿಕ ಬಳಕೆಗಾಗಿ ಅಂತಿಮ ತುರ್ತು ಬಳಕೆಯ ಪಟ್ಟಿ (EUL) ಅಪಾಯ-ಪ್ರಯೋಜನ ಮೌಲ್ಯಮಾಪನವನ್ನು ನಡೆಸುವ ಸಲುವಾಗಿ ತಾಂತ್ರಿಕ ಸಮಿತಿಯು ಈ ಹಿಂದೆ ಕೋವಾಕ್ಸಿನ್‌ನ ತಯಾರಕರಾದ ಭಾರತ್ ಬಯೋಟೆಕ್‌ನಿಂದ ಹೆಚ್ಚುವರಿ ಸ್ಪಷ್ಟೀಕರಣಗಳನ್ನು ಕೇಳಿತ್ತು.
ಇದಕ್ಕೆ ಉತ್ತರಿಸಿದ್ದ ಭಾರತ್ ಬಯೋಟೆಕ್ ಸಂಸ್ಥೆ, ಕೋವ್ಯಾಕ್ಸಿನ್ ರೋಗಲಕ್ಷಣದ COVID-19 ವಿರುದ್ಧ ಶೇ.77.8 ಪರಿಣಾಮಕಾರಿತ್ವವನ್ನು ಹೊಂದಿದ್ದು, ಅಲ್ಲದೆ ಹೊಸ ಡೆಲ್ಟಾ ರೂಪಾಂತರದ ವಿರುದ್ಧ ಶೇ.65.2ರಷ್ಟು ರಕ್ಷಣೆಯನ್ನು ಪ್ರದರ್ಶಿಸಿದೆ. ಹಂತ 3 ಪ್ರಯೋಗಗಳಿಂದ ಕೋವಾಕ್ಸಿನ್ ಪರಿಣಾಮಕಾರಿತ್ವದ ಅಂತಿಮ ವಿಶ್ಲೇಷಣೆಯನ್ನು ಮುಕ್ತಾಯಗೊಳಿಸಿದೆ ಎಂದು ಹೇಳಿತ್ತು.
ಈ ಎಲ್ಲಾ ಬೆಳವಣಿಗೆಯ ನಂತರ, ಇಂದು ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಾ ಸೋಂಕಿತರ ತುರ್ತು ಚಿಕಿತ್ಸೆ ಲಸಿಕೆಗಳ ಪಟ್ಟಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆಯ ಸೇರ್ಪಡೆಗೆ ಅನುಮೋದನೆ ನೀಡಿದೆ. ಆ ಮೂಲಕ ಈ ಪಟ್ಟಿಗೆ ಸೇರಿದ ಭಾರತದ ಎರಡನೇ ಲಸಿಕೆ ಎಂಬ ಕೀರ್ತಿಗೂ ಕೋವ್ಯಾಕ್ಸಿನ್ ಪಾತ್ರವಾಗಿದೆ. ಇದಕ್ಕೂ ಮೊದಲು ಈ ಪಟ್ಟಿಗೆ ಅಸ್ಟ್ರಾಜೆನೆಕಾ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಅನ್ನು ಸೇರ್ಪಡೆ ಮಾಡಲಾಗಿತ್ತು.
ಇದಲ್ಲದೆ ಫಿಜರ್-ಬಯೋಎನ್‌ಟೆಕ್, ಅಮೆರಿಕ ಮೂಲದ ಜಾನ್ಸನ್ ಮತ್ತು ಜಾನ್ಸನ್, ಮಾಡೆರ್ನಾ, ಚೀನಾದ ಸಿನೋಫಾರ್ಮ್ ಮತ್ತು ಆಕ್ಸ್‌ಫರ್ಡ್ ಸಂಸ್ಥೆಯ ಅಸ್ಟ್ರಾಜೆನೆಕಾ ಲಸಿಕೆಗೆಳಗೆ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಬಳಕೆಯ ಅನುಮತಿ ನೀಡಿತ್ತು.