HEALTH TIPS

ಮಧ್ಯಪ್ರದೇಶ: ಚಿರತೆಯನ್ನು1 ಕಿ.ಮೀ. ಬೆನ್ನಟ್ಟಿ, ಕಾದಾಡಿ ಮಗುವನ್ನು ಕಾಪಾಡಿದ ತಾಯಿ

             ಭೋಪಾಲ್‌: 'ಜಗತ್ತಿನಲ್ಲಿ ತಾಯಿಗಿಂತ ದೊಡ್ಡ ಯೋಧ ಬೇರೆ ಇಲ್ಲ' ಎಂಬ ಕನ್ನಡ ಸಿನಿಮಾ ಕೆಜಿಎಫ್‌ನ ಪ್ರಸಿದ್ಧ ಸಂಭಾಷಣೆಯನ್ನು ಮಧ್ಯಪ್ರದೇಶದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರುಜುವಾತುಗೊಳಿಸಿದ್ದಾರೆ. ಚಿರತೆಯನ್ನು ಬೆನ್ನಟ್ಟಿ, ಕಾದಾಡಿ 8 ವರ್ಷದ ಮಗನನ್ನು ಕಾಪಾಡಿದ್ದಾರೆ.

             ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಿಂದ 500 ಕಿ.ಮೀ ದೂರದಲ್ಲಿರುವ ಸಿಧಿ ಜಿಲ್ಲೆಯ ಸಂಜಯ್‌ ಹುಲಿ ಸಂರಕ್ಷಿತ ಪ್ರದೇಶದ ಸಮೀಪದಲ್ಲಿರುವ ಬಾಡಿ ಜರಿಯಾ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ.

              'ಬೈಗಾ ಬುಡಕಟ್ಟು ಸಮುದಾಯದ ಮಹಿಳೆ ಕಿರಣ್‌ ಅವರು ಗುಡಿಸಲಿನ ಹೊರಗೆ ಬೆಂಕಿ ಉರಿಸಿಕೊಂಡು ತನ್ನ ಮೂವರು ಮಕ್ಕಳೊಂದಿಗೆ ಚಳಿ ಕಾಯಿಸುತ್ತಿದ್ದರು. ಇದ್ದಕ್ಕಿದ್ದಂತೆ ಚಿರತೆಯೊಂದು ದಾಳಿ ಮಾಡಿ ಮಗ ರಾಹುಲ್‌ನಲ್ಲಿ ಕಚ್ಚಿಕೊಂಡು ಓಡಿ ಹೋಗಿದೆ' ಎಂದು ಹಿರಿಯ ಅರಣ್ಯಾಧಿಕಾರಿ ಬುಧವಾರ ಪಿಟಿಐಗೆ ತಿಳಿಸಿದ್ದಾರೆ.

              ಇದ್ದಕ್ಕಿದ್ದಂತೆ ಬಂದೆರಗಿದ ಚಿರತೆ ಮಗನನ್ನು ಎಳೆದೊಯ್ದ ಘಟನೆಯಿಂದ ಕಿರಣ್‌ ಧೃತಿಗೆಡದೆ, ತನ್ನ ಇನ್ನಿಬ್ಬರು ಮಕ್ಕಳನ್ನು ಗುಡಿಸಲಿನ ಒಳಗೆ ಕಳುಹಿಸಿ, ಚಿರತೆಯನ್ನು ಬೆನ್ನಟ್ಟಿದ್ದಾರೆ. ಸುಮಾರು 1 ಕಿ.ಮೀ. ವರೆಗೆ ಬೆನ್ನಟ್ಟಿ ಚಿರತೆ ಬಾಯಿಯಿಂದ ಮಗುವನ್ನು ಬಿಡಿಸಿದ್ದಾರೆ.

ಚಿರತೆ ದಾಳಿಯಿಂದ ಮಗುವಿಗೆ ಗಾಯವಾಗಿದೆ. ಚಿರತೆಯಿಂದ ಮಗುವನ್ನು ಬಿಡಿಸಲು ಹೋರಾಡಿದ ಸಂದರ್ಭ ಕಿರಣ್‌ ಕೂಡ ಗಾಯಗೊಂಡಿದ್ದಾರೆ. ಕೊನೆಗೆ ಮಗುವನ್ನು ಚಿರತೆ ಬಾಯಿಂದ ಬಿಡಿಸಿಕೊಂಡು ಹಿಂತಿರುಗುವಲ್ಲಿ ಕಿರಣ್‌ ಸಫಲರಾಗಿದ್ದಾರೆ.

               ಮಹಿಳೆಯ ಧೈರ್ಯ ಮತ್ತು ಸಾಹಸವನ್ನು ಪ್ರಶಂಸಿಸಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್ ಟ್ವೀಟ್‌ ಮಾಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಕೆಯ ಪರಾಕ್ರಮವನ್ನು ಮೆಚ್ಚಿಕೊಂಡಿದ್ದಾರೆ.

             'ಇದ್ದಕ್ಕಿದ್ದಂತೆ ಸಂಭವಿಸಿದ ಚಿರತೆ ದಾಳಿಯಿಂದ ಕಿರಣ್‌ ಆಘಾತಕ್ಕೆ ಒಳಗಾಗಿದ್ದಾರೆ. ಆದರೆ ಮಾನಸಿಕ ಸ್ಥೈರ್ಯವನ್ನು ಕಳೆದುಕೊಂಡಿಲ್ಲ. ಸುಮಾರು 1 ಕಿ.ಮೀ. ವರೆಗೆ ಚಿರತೆಯನ್ನು ಬೆನ್ನಟ್ಟಿದ್ದಾರೆ. ಪೊದೆಯ ಮರೆಗೆ ಮಗುವನ್ನು ಎಳೆದೊಯ್ದ ಸಂದರ್ಭ ಕೋಲಿನ ಸಹಾಯದಿಂದ ಮತ್ತು ಜೋರಾಗಿ ಕಿರುಚಾಡುತ್ತ ಚಿರತೆಯನ್ನು ಭಯ ಪಡಿಸಲು ಪ್ರಯತ್ನಿಸಿದ್ದಾರೆ. ಇದರಿಂದ ಭೀತಿಗೊಳಗಾದ ಚಿರತೆ ಮಗುವನ್ನು ಅಲ್ಲೇ ಬಿಟ್ಟು ಓಡಿಹೋಗಿದೆ. ಮಗುವಿನ ಬೆನ್ನು, ಕುತ್ತಿಗೆ ಮತ್ತು ಕಣ್ಣುಗಳಿಗೆ ಗಾಯಗಳಾಗಿವೆ. ಮಹಿಳೆ ಕಿರಣ್‌ ಕೂಡ ಗಾಯಗೊಂಡಿದ್ದಾರೆ' ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಹಿಳೆಯ ಸಾಹಸವನ್ನು ವರ್ಣಿಸಿದ್ದಾರೆ.

               ವಲಯದ ರೇಂಜರ್‌ ಅಸೀಮ್‌ ಭುರಿಯಾ ಅವರು ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ತಕ್ಷಣ ಚಿಕಿತ್ಸೆಗೆ 1,000 ಸಹಾಯಧನವನ್ನು ನೀಡಿದ್ದಾರೆ. ಚಿಕಿತ್ಸೆಯ ಖರ್ಚನ್ನು ಅರಣ್ಯ ಇಲಾಖೆ ಭರಿಸುವುದಾಗಿ ತಿಳಿಸಿದೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries