ನವದೆಹಲಿ: ತಮಿಳುನಾಡಿನ ನೀಲ್‌ಗಿರಿ ಜಿಲ್ಲೆಯ ಕುನೂರ್ ಬಳಿ ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿರುವ ಭಾರತದ ಮೊದಲ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ಅಂತ್ಯಸಂಸ್ಕಾರವನ್ನು ಡಿಸೆಂಬರ್ 10ರ ಶುಕ್ರವಾರ ನಡೆಸಲಾಗುವುದು ಎಂದು ತಿಳಿದು ಬಂದಿದೆ.
ಅವರ ಪಾರ್ಥಿವ ಶರೀರವನ್ನು ಗುರುವಾರ ಸಂಜೆ ವೇಳೆಗೆ ಸೇನಾ ವಿಮಾನದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಗೆ ಕರೆತರುವ ಸಾಧ್ಯತೆಯಿದೆ. ಶುಕ್ರವಾರ ಪಾರ್ಥಿವ ಶರೀರವನ್ನು ದೆಹಲಿಯಲ್ಲಿ ಇರುವ ಅವರ ಮನೆಗೆ ತರಲಾಗುತ್ತದೆ.ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ತದನಂತರದಲ್ಲಿ ಅಂತಿಮ ಗೌರವ ಸಲ್ಲಿಸಲು ಅವಕಾಶ ನೀಡಲಾಗುವುದು. ಬಳಿಕ ಕಾಮರಾಜ್ ಮಾರ್ಗದಿಂದ ದೆಹಲಿ ಕಂಟೋನ್ಮೆಂಟ್‌ನ ಬ್ರಾರ್ ಸ್ಕ್ವೇರ್ ಸ್ಮಶಾನದವರೆಗೆ ಅಂತ್ಯಕ್ರಿಯೆ ಮೆರವಣಿಗೆ ನಡೆಯಲಿದೆ. ಅಂತಿಮವಾಗಿ ದೆಹಲಿ ಕಂಟೋನ್ಮೆಂಟ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.
ಉತ್ತರಾಖಂಡದಲ್ಲಿ ಮೂರು ದಿನ ಶೋಕಾಚರಣೆ:
ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿದಂತೆ ಇತರೆ 11 ಸಶಸ್ತ್ರ ಪಡೆಗಳ ಸಿಬ್ಬಂದಿ ನಿಧನದ ಹಿನ್ನೆಲೆ ಉತ್ತರಾಖಂಡದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಮಾಡಲಾಗುವುದು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಭಿನವ್ ಕುಮಾರ್ ಘೋಷಣೆ ಮಾಡಿದ್ದಾರೆ. ಉತ್ತರಾಖಂಡ ವಿಧಾನಸಭೆಯಲ್ಲಿ ಡಿಸೆಂಬರ್ 9ರಂದು ಸಂತಾಪ ಸೂಚಿಸಲಾಗುವುದು, ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಜನರ ಸಾವಿನ ನಂತರ ಇಡೀ ದಿನ ಸದನವನ್ನು ಮುಂದೂಡಲಾಗುವುದು ಎಂದು ವಿಧಾನಸಭೆಯ ಸ್ಪೀಕರ್ ಪ್ರೇಮಚಂದ್ ಅಗರ್ವಾಲ್ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತ:
ತಮಿಳುನಾಡಿನ ನೀಲ್‌ಗಿರಿ ಜಿಲ್ಲೆಯ ಕುನೂರ್ ಬಳಿ ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿ ಒಟ್ಟು 13 ಜನರು ಮೃತಪಟ್ಟಿದ್ದಾರೆ. ಹೆಲಿಕಾಪ್ಟರ್ ಪತನಗೊಂಡ ಸ್ಥಳದಿಂದ ರಕ್ಷಿಸಲ್ಪಟ್ಟಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ಶೇ.80 ಸುಟ್ಟ ಗಾಯಗಳಾಗಿದ್ದು, ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ.