ನವದೆಹಲಿ: ಇಲ್ಲಿಯವರೆಗೂ ದೇಶದಲ್ಲಿನ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 101 ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ.
ಜಂಟಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ ವಾಲ್, ಮಹಾರಾಷ್ಟ್ರದಿಂದ 32 ಪ್ರಕರಣಗಳು ವರದಿಯಾಗಿವೆ, ದೆಹಲಿಯಲ್ಲಿ 22, ರಾಜಸ್ಥಾನದಲ್ಲಿ 17, ಕರ್ನಾಟಕ ಮತ್ತು ತೆಲಂಗಾಣದಲ್ಲಿ 8, ಗುಜರಾತ್ ಮತ್ತು ಕೇರಳದಲ್ಲಿ ತಲಾ 5, ಆಂಧ್ರ ಪ್ರದೇಶ, ಚಂಡೀಘಡ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 1 ಪ್ರಕರಣ ಪತ್ತೆಯಾಗಿರುವುದಾಗಿ ತಿಳಿಸಿದರು.
ವಿಶ್ವದ 91 ರಾಷ್ಟ್ರಗಳಲ್ಲಿ ಓಮಿಕ್ರಾನ್ ರೂಪಾಂತರ ಪತ್ತೆಯಾಗಿರುವುದಾಗಿ ಹೇಳಿದ ಲವ್ ಅಗರ್ ವಾಲ್, ಓಮಿಕ್ರಾನ್ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ವೇಗವಾಗಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸಮುದಾಯಕ್ಕೆ ಹರಡಿದಾಗ ಓಮಿಕ್ರಾನ್ ಡೆಲ್ಟಾ ರೂಪಾಂತರನ್ನು ಹೊರಹಾಕುವ ಸಾಧ್ಯತೆಯಿರುವುದಾಗಿ ತಿಳಿಸಿದರು.
ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನವನ್ನು ಶ್ಲಾಘಿಸಿದ ಆರೋಗ್ಯ ಸಚಿವಾಲಯದ ಅಧಿಕಾರಿ, ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಲಸಿಕೆಯನ್ನು ದೇಶದಲ್ಲಿ ನಡೆಸಲಾಗಿದೆ. ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಕೇರಳದಿಂದಲೇ ಶೇ. 40.31 ರಷ್ಟು ಕೊಡುಗೆಯಿದೆ. ಕಳೆದ 20 ದಿನಗಳಲ್ಲಿ ದೈನಂದಿನ ಪ್ರಕರಣಗಳ ಸಂಖ್ಯೆಯಲ್ಲಿ 10,000ಕ್ಕಿಂತ ಇಳಿಕೆಯಾಗಿದೆ ಎಂದು ಅಗರ್ ವಾಲ್ ಹೇಳಿದರು.
ಕ್ರಿಸ್ ಮಸ್ ಹಾಗೂ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಅನವಶ್ಯಕವಾಗಿ ಓಡಾಡಬೇಡಿ, ಗುಂಪು ಗುಂಪಾಗಿ ಸೇರಬೇಡಿ ಹಾಗೂ ಅದ್ದೂರಿತನದಿಂದ ಹಬ್ಬ ಆಚರಿಸದಂತೆ ಐಸಿಎಂಆರ್ ಡಿಜಿ ಡಾ. ಬಲರಾಮ್ ಭಾರ್ಗವ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.