ನವದೆಹಲಿ: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(ಎಎಐ)ದ ಅಡಿಯಲ್ಲಿ ಬರುವ ದೇಶದ 11 ವಿಮಾನ ನಿಲ್ದಾಣಗಳಲ್ಲಿ ಬುಧವಾರ ಒಟ್ಟು 1,502 ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ ಯಾರೊಬ್ಬರಿಗೂ ಪಾಸಿಟಿವ್ ಬಂದಿಲ್ಲ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಅಹಮದಾಬಾದ್ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳು ಖಾಸಗಿ ಕಂಪನಿಗಳಿಂದ ನಡೆಸಲ್ಪಡುತ್ತಿವೆ. ಈ ವಿಮಾನ ನಿಲ್ದಾಣಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(AAI) ನಡೆಸುವುದಿಲ್ಲ.
ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಎಐ, ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿದೆ ಮತ್ತು ನಿರ್ವಹಿಸುತ್ತಿದೆ. 11 ಎಎಐ ವಿಮಾನ ನಿಲ್ದಾಣಗಳಲ್ಲಿ ಬುಧವಾರ 64 ಅಂತಾರಾಷ್ಟ್ರೀಯ ವಿಮಾನಗಳು ಆಗಮಿಸಿವೆ.
"64 ಅಂತರಾಷ್ಟ್ರೀಯ ವಿಮಾನಗಳ ಪೈಕಿ ಏಳು ವಿಮಾನಗಳು 'ಅಪಾಯದಲ್ಲಿರುವ ದೇಶಗಳಿಂದ' ಮತ್ತು 57 'ಅಪಾಯವಿಲ್ಲದ ದೇಶಗಳಿಂದ ಬಂದಿವೆ" ಎಂದು ಎಎಐ ಟ್ವಿಟರ್‌ನಲ್ಲಿ ತಿಳಿಸಿದೆ.
ಈ ವಿಮಾನ ನಿಲ್ದಾಣಗಳಲ್ಲಿ ಒಟ್ಟು 1,502 ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. 311 ಪ್ರಯಾಣಿಕರನ್ನು ಕ್ಷಿಪ್ರ ಆರ್‌ಟಿ-ಪಿಸಿಆರ್ ಪರೀಕ್ಷೆಯ ಮೂಲಕ ಮತ್ತು 1,191 ಪ್ರಯಾಣಿಕರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಯ ಮೂಲಕ ಪರೀಕ್ಷಿಸಲಾಯಿತು. ಆದರೆ ಯಾರೊಬ್ಬರಿಗೂ ಪಾಸಿಟಿವ್ ಕಂಡುಬಂದಿಲ್ಲ" ಎಂದು ಎಎಐ ಹೇಳಿದೆ.