ನವದೆಹಲಿ: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಹೆಚ್ಚುತ್ತಿರುವ ಆತಂಕದ ನಡುವೆ, ಎರಡು ಡೋಸ್ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರಗಳಿಗೆ ಸೂಚನೆಗಳನ್ನು ನೀಡುತ್ತಿದೆ. ಅದಾಗ್ಯೂ, ದೇಶದ ಐದು ರಾಜ್ಯಗಳಲ್ಲಿ 11 ಕೋಟಿಗೂ ಅಧಿಕ ಡೋಸ್ ಲಸಿಕೆಯು ಬಳಕೆಯಾಗದೇ ಉಳಿದಿರುವುದು ಗೊತ್ತಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಬಿಹಾರ ಮತ್ತು ರಾಜಸ್ಥಾನಗಳಲ್ಲಿ ಒಟ್ಟು 11 ಕೋಟಿ ಡೋಸ್ ಕೊವಿಡ್-19 ಲಸಿಕೆಯು ಇದುವರೆಗೂ ಬಳಕೆಯಾಗದೇ ಉಳಿದಿದೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯವು ನೀಡಿದ ಮಾಹಿತಿ ಪ್ರಕಾರ, ಭಾರತದಲ್ಲಿ 23 ಕೋಟಿ ಡೋಸ್ ಕೊವಿಡ್-19 ಲಸಿಕೆಯು ಲಭ್ಯವಿದೆ. ಈ ಪೈಕಿ ಐದು ರಾಜ್ಯಗಳು 11 ಕೋಟಿ ಡೋಸ್ ಲಸಿಕೆಯನ್ನು ಹೊಂದಿವೆ. ಈ ಲಸಿಕೆಯು ಇದುವರೆಗೂ ಬಳಕೆಯಾಗಿಲ್ಲ ಎಂದು ತಿಳಿಸಲಾಗಿದೆ.
ರಾಜ್ಯವಾರು ಲಸಿಕೆಯ ಸಂಗ್ರಹ ಎಷ್ಟಿದೆ?
ಉತ್ತರ ಪ್ರದೇಶವು ಅತಿಹೆಚ್ಚು ಕೊವಿಡ್-19 ಲಸಿಕೆಯನ್ನು ಬಳಕೆ ಮಾಡದೇ ಸಂಗ್ರಹಿಸಿಟ್ಟುಕೊಂಡಿರುವುದು ಗೊತ್ತಾಗಿದೆ. ಉತ್ತರ ಪ್ರದೇಶದಲ್ಲಿ 2.9 ಕೋಟಿ ಡೋಸ್ ಲಸಿಕೆ, ಪಶ್ಚಿಮ ಬಂಗಾಳದಲ್ಲಿ 2.5 ಕೋಟಿ ಡೋಸ್ ಲಸಿಕೆ, ಮಹಾರಾಷ್ಟ್ರದಲ್ಲಿ 2.2 ಕೋಟಿ ಡೋಸ್ ಲಸಿಕೆ, ಬಿಹಾರದಲ್ಲಿ 1.80 ಕೋಟಿ ಡೋಸ್ ಲಸಿಕೆ, ರಾಜಸ್ಥಾನದಲ್ಲಿ 1.43 ಕೋಟಿ ಡೋಸ್ ಲಸಿಕೆ, ತಮಿಳುನಾಡಿನಲ್ಲಿ 1.35 ಕೋಟಿ ಡೋಸ್ ಲಸಿಕೆ ಮತ್ತು ಮಧ್ಯಪ್ರದೇಶದಲ್ಲಿ 1.1 ಕೋಟಿ ಡೋಸ್ ಲಸಿಕೆಯು ಬಳಕೆಯಾಗದೇ ಉಳಿದಿದೆ.
ಕೊವಿಡ್-19 ಲಸಿಕೆ ಲಭ್ಯವಿದ್ದರೂ ವಿತರಣೆಯಲ್ಲಿ ಹಿಂದೆ
ಅತಿಹೆಚ್ಚು ದಾಸ್ತಾನು ಹೊಂದಿರುವ ಕೆಲವು ರಾಜ್ಯಗಳಲ್ಲೇ ಕೊವಿಡ್-19 ಲಸಿಕೆಯನ್ನು ಪಡೆದುಕೊಳ್ಳದ ಅತಿಹೆಚ್ಚು ಜನರು ಕಂಡು ಬಂದಿದ್ದಾರೆ. ಎರಡು ಡೋಸ್ ಲಸಿಕೆಯಿರಲಿ, ಅದೆಷ್ಟೋ ಜನರು ಇಂದಿಗೂ ಮೊದಲ ಡೋಸ್ ಲಸಿಕೆಯನ್ನೇ ಪಡೆದುಕೊಂಡಿಲ್ಲ. ಈ ಪಟ್ಟಿಯಲ್ಲೂ ಉತ್ತರ ಪ್ರದೇಶವು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಯುಪಿಯಲ್ಲಿ 3.50 ಕೋಟಿ ಜನರು ಈವರೆಗೂ ಒಂದು ಡೋಸ್ ಲಸಿಕೆಯನ್ನು ಪಡೆದುಕೊಂಡಿಲ್ಲ. ಬಿಹಾರದಲ್ಲಿ 1.89 ಕೋಟಿ ಜನರು ಲಸಿಕೆ ಪಡೆದುಕೊಂಡಿಲ್ಲ. ಮಹಾರಾಷ್ಟ್ರದಲ್ಲಿ 1.71 ಕೋಟಿ ಹಾಗೂ ತಮಿಳುನಾಡಿನಲ್ಲಿ 1.24 ಮಂದಿ ಕೊವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ಕೂಡ ಹಾಕಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ದೇಶದಲ್ಲಿ 129 ಕೋಟಿ ಡೋಸ್ ಕೊವಿಡ್ ಲಸಿಕೆ ವಿತರಣೆ
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿ 326 ದಿನಗಳು ಕಳೆದಿವೆ. ಮಂಗಳವಾರ ರಾತ್ರಿ 7 ಗಂಟೆ ವೇಳೆಗೆ 66,37,528 ಡೋಸ್ ಲಸಿಕೆಯನ್ನು ವಿತರಿಸಲಾಗಿದ್ದು, ದೇಶದಲ್ಲಿ ಒಟ್ಟು 129,46,08,045 ಡೋಸ್ ಕೊವಿಡ್-19 ಲಸಿಕೆಯನ್ನು ನೀಡಲಾಗಿದೆ. ಈ ಪೈಕಿ 80,47,68,300 ಮಂದಿ ಮೊದಲ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದರೆ, 48,98,39,745 ಫಲಾನುಭವಿಗಳು ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ.
ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿತ್ತು.
ದೇಶದಲ್ಲಿ ಕೊವಿಡ್-19 ಲಸಿಕೆ ಲಭ್ಯತೆ ಪ್ರಮಾಣ ಎಷ್ಟಿದೆ?
2021ರ ಡಿಸೆಂಬರ್ 7ರ ಅಂಕಿ-ಅಂಶಗಳ ಪ್ರಕಾರ, 1,39,06,60,790 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕಳುಹಿಸಲಾಗಿರುವ ಲಸಿಕೆಯ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
* ಪೂರೈಕೆಯಾದ ಲಸಿಕೆ ಪ್ರಮಾಣ - 1,39,06,60,790
* ಕೊವಿಡ್-19 ಲಸಿಕೆಯ ಲಭ್ಯತೆ - 20,13,38,526