ಕಾಬೂಲ್: ಕಾಬೂಲ್‌ನಿಂದ 114 ಮಂದಿ ಅಫ್ಘಾನಿಸ್ತಾನ ಸಿಖ್ಖರನ್ನು ಭಾರತವು ಏರ್‌ಲಿಫ್ಟ್ ಮಾಡಿದೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಹಲವು ಮಂದಿಯನ್ನು ಭಾರತಕ್ಕೆ ಕರೆತರಲಾಗಿತ್ತು. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಹಿಂದೂ ಹಾಗೂ ಸಿಖ್ಖರನ್ನು ಕರೆತರಲು ಭಾರತ ಮುಂದಾಗಿದೆ. ಸಿಖ್ಖರು ಬಂದ ಬಳಿಕ ಸೋಬ್ತಿ ಫೌಂಡೇಶನ್ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಿದೆ ಎಂದು ಪುನೀತ್ ಸಿಂಗ್ ಚಂಧೋಕ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನಲ್ಲಿರುವವರು ತಾಲಿಬಾನಿಗಳ ಅಟ್ಟಹಾಸಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಅಲ್ಲಿನ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಫ್ಘಾನಿಸ್ತಾನದ ಆರ್ಥಿಕತೆ ಬಹುತೇಕ ಪತನದತ್ತ ಸಾಗಿದೆ. ಹಳ್ಳಿಗಾಡುಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯೇ ಇಲ್ಲದಂತಾಗಿದೆ. ನೂರಾರು ಮೈಲಿ ದೂರಕ್ಕೆ ಒಂದರಂತೆ ಇರುವ ಬ್ಯಾಂಕ್ನಲ್ಲಿ ಸಿಕ್ಕಾಪಟ್ಟೆ ಜನಜಂಗುಳಿ.
ಗಂಭೀರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿದ್ದು, ನಿರ್ದಿಷ್ಟ ಅವಧಿಗೆ ಚಿಕಿತ್ಸೆ ಪಡೆಯುತ್ತಿರುವವರ ಪಾಡಂತೂ ಶತ್ರುಗಳಿಗೂ ಬೇಡ ಎಂಬಂತಾಗಿದೆ. ಏಕೆಂದರೆ, ಹೀಗೆ ನೂರಾರು ಮೈಲಿ ಆಚೆಗೆ ಒಂದರಂತೆ ಇರುವ ಬ್ಯಾಂಕ್ಗಳಲ್ಲಿ ಕೂಡ ಎಲ್ಲ ಗ್ರಾಹಕರಿಗೂ ನಗದು ಸಿಗುತ್ತಾ ಇಲ್ಲ.ಆಗಸ್ಟ್ 15ರಂದು ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಾಗಿಂದ ಅಲ್ಲಿನ ಆರ್ಥಿಕತೆ ಬಹುತೇಕ ಕುಸಿದುಹೋಗಿದೆ. ಜಗತ್ತಿನಲ್ಲೇ ಅತ್ಯಂತ ಭೀಕರ ಮಾನವೀಯ ಬಿಕ್ಕಟ್ಟು ತಲೆದೋರಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಇದ್ದ ಮಿಲಿಯನ್ಗಟ್ಟಲೆ ಡಾಲರ್ ಅನುದಾನ ಮಾಯವಾಗಿದೆ. ಸರ್ಕಾರಕ್ಕೆ ಸೇರಿದ ಬಿಲಿಯನ್ಗಟ್ಟಲೆ ಡಾಲರ್ ಆಸ್ತಿಗೆ ತಡೆ ಬಿದ್ದಿದೆ. ಇನ್ನು ಆರ್ಥಿಕ ನಿರ್ಬಂಧದ ಕಾರಣಕ್ಕೆ ಜಾಗತಿಕ ಮಟ್ಟದ ಬ್ಯಾಂಕಿಂಗ್ ವ್ಯವಸ್ಥೆಯ ನೆರವು ಈಗಿನ ಸರ್ಕಾರಕ್ಕೆ ಸಿಗುತ್ತಿಲ್ಲ. ಬ್ಯಾಂಕ್, ಉದ್ಯಮಗಳಿಗೆ ಹಣಕಾಸಿನ ಕೊರತೆ ಎದುರಾಗಿದ್ದು, ಆಹಾರ ಮತ್ತು ತೈಲ ಬೆಲೆಗಳು ತಾರಾಮಾರಾ ಏರಿಕೆ ಆಗಿವೆ. ಈ ವರ್ಷದ ಅಂತ್ಯದ ಹೊತ್ತಿಗೆ ಅಫ್ಘಾನಿಸ್ತಾನದಲ್ಲಿ 32 ಲಕ್ಷ ಮಕ್ಕಳು ಗಂಭೀರ ಸ್ವರೂಪದ ಅಪೌಷ್ಟಿಕತೆಯಿಂದ ನರಳುವಂತಾಗಬಹುದು, ಆ ಪೈಕಿ 10 ಲಕ್ಷ ಮಕ್ಕಳು ತಾಪಮಾನ ಇಳಿಕೆಯಿಂದ ಸಾವಿಗೀಡಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಎಂಥ ಪರಿಸ್ಥಿತಿ ಅಂದರೆ, ಹತಾಶ ಕುಟುಂಬಗಳು ರಸ್ತೆ ಪಕ್ಕದಲ್ಲಿ ತಮ್ಮ ಮನೆಯ ಪೀಠೋಪಕರಣಗಳನ್ನು ಆಹಾರಕ್ಕೆ ಬದಲಿಯಾಗಿ ನೀಡುತ್ತಿದ್ದಾರೆ. ಇತರ ಪ್ರಮುಖ ನಗರಗಳಲ್ಲಿ ಸರ್ಕಾರದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತುರ್ತು ಔಷಧಗಳನ್ನು ಖರೀದಿ ಮಾಡುವುದಕ್ಕೆ ಹಣ ಇಲ್ಲ. ಅಷ್ಟೇ ಅಲ್ಲ, ವೈದ್ಯರು, ನರ್ಸ್ಗಳಿಗೆ ಹಣ ಪಾವತಿಸುವುದಕ್ಕೂ ಆಗುತ್ತಿಲ್ಲ. ವೈದ್ಯಕೀಯ ಸಿಬ್ಬಂದಿ ಪೈಕಿ ಕೆಲವರು ಈಗಾಗಲೇ ಕೆಲಸ ಬಿಟ್ಟಿದ್ದಾರೆ. ಆರ್ಥಿಕ ನಿರಾಶ್ರಿತರು ಇರಾನ್, ಪಾಕಿಸ್ತಾನದ ಗಡಿಯ ಕಡೆಗೆ ಸಾಗುತ್ತಲೇ ಇದ್ದಾರೆ. ಅಂತಾರಾಷ್ಟ್ರೀಯ ಸಮುದಾಯಗಳಿಗೆ ಅಫ್ಘಾನಿಸ್ತಾನದ ಜನರ ಬಗ್ಗೆ ಅಪಾರ ಕಾಳಜಿ ಇರುವುದು ಹೌದು. ಆದರೆ ಹಣವನ್ನು ತಾಲಿಬಾನ್ಗಳ ಕೈಗೆ ಇಡುವುದು ಹೇಗೆ ಎಂಬುದು ಆತಂಕಕ್ಕೆ ಕಾರಣವಾಗಿದೆ. ಅಫ್ಘಾನಿಸ್ತಾನ ಮತ್ತು ನೆರೆಯ ದೇಶಗಳಲ್ಲಿ ಇರುವ ಆಫ್ಘನ್ ನಿರಾಶ್ರಿತರಿಗೆ 129 ಕೋಟಿ ಅಮೆರಿಕನ್ ಡಾಲರ್ ಒದಗಿಸುವುದಾಗಿ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟವು ಭರವಸೆ ನೀಡಿವೆ. ಈ ನೆರವಿನಿಂದ ತುಂಬಾ ದೊಡ್ಡ ಮಟ್ಟದ ಅನುಕೂಲ ಏನೂ ಆಗಲ್ಲ ಎನ್ನುತ್ತಾರೆ ಆರ್ಥಿಕತಜ್ಞರು ಮತ್ತು ಎನ್ಜಿಒಗಳು. ಈ ಹಿಂದಿನ ಸರ್ಕಾರದ ಅಧಿಯಲ್ಲಿ ದೇಶದ ಜಿಡಿಪಿಯ ಶೇ 45ರಷ್ಟು ವಿದೇಶೀ ನೆರವಿನಿಂದ ಬರುತ್ತಿತ್ತು. ಅದು ಸರ್ಕಾರದ ಬಜೆಟ್ನ ಶೇ 75ರಷ್ಟು ಆಗುತ್ತಿತ್ತು. ಅದರಲ್ಲೇ ಆರೋಗ್ಯ, ಶೈಕ್ಷಣಿಕ ಸೇವೆಯೂ ಒಳಗೊಂಡಿತ್ತು. ಆದರೆ ಯಾವಾಗ ತಾಲಿಬಾನ್ ಆಡಳಿತ ಬಂತೋ ಅಮೆರಿಕದಲ್ಲಿನ ಬೈಡನ್ ಆಡಳಿತವು ಅಫ್ಘಾನಿಸ್ತಾನದ ವಿದೇಶಿ ಮೀಸಲು ಮೊತ್ತವಾದ 950 ಕೋಟಿ ಡಾಲರ್ ಸ್ಥಗಿತಗೊಳಿಸಿತು. "ಒಂದು ವೇಳೆ ಇಲ್ಲಿನ ವ್ಯವಸ್ಥೆಯನ್ನು ಮುಂದಿನ ಕೆಲ ತಿಂಗಳಲ್ಲಿ ಕಳೆದುಕೊಂಡು ಬಿಟ್ಟರೆ, ದೇಶಕ್ಕೆ ಅಗತ್ಯ ಇರುವುದನ್ನು ಪೂರೈಕೆ ಮಾಡುವುದಕ್ಕೆ ಬೇಕಾದದ್ದನ್ನು ಪುನರ್ನಿರ್ಮಿಸುವುದು ಕಷ್ಟ. ಹಿಂತಿರುಗುವುದಕ್ಕೆ ಸಾಧ್ಯವಿಲ್ಲದ ಮಟ್ಟಿಗೆ ವೇಗವಾಗಿ ಕುಸಿತದತ್ತ ನಾವು ಸಾಗುತ್ತಿದ್ದೇವೆ. ಯಾವುದೇ ಮಾನವೀಯ ಬಿಕ್ಕಟ್ಟು ಮಾನವೀಯ ಬೆಂಬಲದಿಂದ ಮಾತ್ರ ನಿರ್ವಹಿಸುವುದಕ್ಕೆ ಸಾಧ್ಯ, ಎನ್ನುತ್ತಾರೆ ಯುಎನ್ಡಿಪಿ ಪ್ರತಿನಿಧಿ ಅಬ್ದಲ್ಲಾ ಅಲ್ ದರ್ದಾರಿ. ಅಫ್ಘಾನಿಸ್ತಾನದ ಕೇಂದ್ರ ಬ್ಯಾಂಕ್ ಅವಲಂಬಿತ ಆಗಿದ್ದ ಯುಎಸ್ ಡಾಲರ್ ಒಳಗೊಂಡ ರವಾನೆಯನ್ನು ನಿಲ್ಲಿಸಿತು. ಐತಿಹಾಸಿಕವಾಗಿಯೇ ಯಾವುದೇ ದೇಶ ಇಷ್ಟು ವೇಗವಾಗಿ ಇಷ್ಟು ದೊಡ್ಡ ಪ್ರಮಾಣದ ಆರ್ಥಿಕ ಪತನ ಕಂಡಿರಲಿಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಕಳೆದ ತಿಂಗಳು ಎಚ್ಚರಿಸಿದಂತೆ, ಈ ವರ್ಷ ಶೇ 30ರಷ್ಟು ಆರ್ಥಿಕತೆ ಕುಸಿಯಬಹುದು.