ಕೋಝಿಕ್ಕೋಡ್ : ಕೇರಳದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ತನ್ನ 11ನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಸಮಾನವಾದ ಸಮವಸ್ತ್ರವನ್ನು ಜಾರಿಗೊಳಿಸಿದೆಯೆಂದು ವರದಿಯಾಗಿದೆ.
ಇದಕ್ಕೂ ಮುನ್ನ ಈ ವಿದ್ಯಾಲಯದಲ್ಲಿ ಬಾಲಕಿಯರು ಸಲ್ವಾರ್-ಕಮೀಝ್ ಅಥವಾ ಸ್ಕರ್ಟ್ ಹಾಗೂ ಶರ್ಟ್ ಅನ್ನು ಸಮವಸ್ತ್ರವಾಗಿ ಧರಿಸುತ್ತಿದ್ದರು.
'' ರಾಜ್ಯದಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಲಿಂಗಸಮಾನತೆಯ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಶಾಲೆಯ ಶಿಕ್ಷಕರು ಮೊದಲಿಗೆ 11ನೇ ತರಗತಿಯ ಬಾಲಕರು ಹಾಗೂ ಬಾಲಕಿಯರಿಗೆ ಸಮಾನ ಸಮವಸ್ತ್ರವನ್ನು ಜಾರಿಗೊಳಿಸುವ ಚಿಂತನೆಯನ್ನು ಮುಂದಿಟ್ಟಿದ್ದರು ಎಂದು ಶಾಲಾ ಪ್ರಾಂಶುಪಾಲೆ ಇಂದೂ ಆರ್. ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ವಿದ್ಯಾರ್ಥಿ,ವಿದ್ಯಾರ್ಥಿನಿಯರ ಪಾಲಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಶಿಕ್ಷಕ-ರಕ್ಷಕ ಸಂಘವೂ ಕೂಡಾ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದೆ'' ಎಂದು ಆಕೆ ಹೇಳಿದ್ದಾರೆ.
ಆದಾಗ್ಯೂ ನೂತನ ಸಮವಸ್ತ್ರವನ್ನು ಧರಿಸುವಂತೆ ಯಾವುದೇ ವಿದ್ಯಾರ್ಥಿಯ ಮೇಲೆ ಶಾಲೆಯು ಒತ್ತಡ ಹೇರುವುದಿಲ್ಲವೆಂದು ಶಾಲಾ ಶಿಕ್ಷಕ-ರಕ್ಷಕರ ಸಂಘದ ಅಧ್ಯಕ್ಷ ಕೆ. ಶಿಬು ತಿಳಿಸಿದ್ದಾರೆ. ವಿದ್ಯಾರ್ಥಿನಿಯರು ಓವರ್‌ಕೋಟ್, ಸ್ಕಾರ್ಫ್ ಅಥವಾ ಪರ್ದಾವನ್ನು ಧರಿಸುವ ಸ್ವಾತಂತ್ರವನ್ನು ಹೊಂದಿದ್ದಾರೆಂದು ಅವರು ಹೇಳಿದ್ದಾರೆ.
ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯೊಂದು ಲಿಂಗಭೇದವಿಲ್ಲದೆ ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಸಮವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿರುವುದು ಇದೇ ಮೊದಲ ಸಲವಾಗಿದೆ. ಈ ಮೊದಲು ಕೇರಳದ ಕೆಲವು ಸರಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸಮಾನಸಮವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿತ್ತು.
ಎರ್ನಾಕುಲಂ ಸಮೀಪದ ವಲಯನ್ಚಿರಂಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ರಾಜ್ಯದಲ್ಲಿ ತನ್ನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಮಾನ ಸಮವಸ್ತ್ರವನ್ನು ಜಾರಿಗೆ ತಂದ ಕೇರಳದ ಪ್ರಪ್ರಥಮ ಸರಕಾರಿ ಶಾಲೆಯಾಗಿದೆ.