ವಡೋದರಾ: ಗುಜರಾತಿನ ವಡೋದರಾ ಜಿಐಡಿಸಿ ಪ್ರದೇಶದಲ್ಲಿ ಶುಕ್ರವಾರ ರಾಸಾಯನಿಕ ಕಾರ್ಖಾನೆಯ ಬಾಯ್ಲರ್ ಸ್ಪೋಟಗೊಂಡು ನಾಲ್ಕು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. 11 ಜನರು ಗಾಯಗೊಂಡಿದ್ದಾರೆ.
ಮೃತಪಟ್ಟವರಲ್ಲಿ 4 ವರ್ಷದ ಬಾಲಕಿ, 65 ವರ್ಷದ ಪುರುಷ, ಹದಿಹರೆಯದವರು ಮತ್ತು 30 ವರ್ಷದ ಮಹಿಳೆ ಸೇರಿದ್ದಾರೆ.
“ಬೆಳಿಗ್ಗೆ 9.30 ರ ಸುಮಾರಿಗೆ ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡಿದೆ. ಹದಿನೈದು ಜನರು ಗಾಯಗೊಂಡಿದ್ದರು. ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಅವರಲ್ಲಿ ನಾಲ್ವರು ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಕರಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸಾಜಿದ್ ಬಲೋಚ್ ಹೇಳಿದ್ದಾರೆ.
ಘಟನೆಯಲ್ಲಿ ಪ್ರಾಣ ಕಳೆದುಕೊಂಡವರು ಮತ್ತು ಗಾಯಗೊಂಡವರಲ್ಲಿ ಕಾರ್ಮಿಕರು ಸೇರಿದ್ದಾರೆ. ಜೊತೆಗೆ ಸ್ಫೋಟ ಸಂಭವಿಸಿದಾಗ ಆ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದ ಜನರು ಪ್ರಾಣಕಳೆದುಕೊಂಡಿದ್ದಾರೆ ಎಂದು ಹೇಳಿದರು.
“ನಾಲ್ವರು ವ್ಯಕ್ತಿಗಳು ಸುಟ್ಟ ಗಾಯಗಳಿಂದಾಗಿ ಅಥವಾ ಸ್ಫೋಟಗೊಂಡ ಸ್ಥಳದಿಂದ ಹಾರಿದ ವಸ್ತುಗಳ ಪ್ರಬಲ ಹೊಡೆತದಿಂದ ಸಾವನ್ನಪ್ಪಿದ್ದಾರೆ. ಈಗಾಗಲೇ ಫೋರೆನ್ಸಿಕ್ ತಂಡವು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ಕೈಗೊಂಡಿದೆ ಎಂದು ಬಲೂಚ್ ಹೇಳಿದರು.