ಮೊರದಾಬಾದ್: 'ಮೊರದಾಬಾದ್ ಎಕ್ಸ್‌ಪ್ರೆಸ್' ಎಂದೇ ಪ್ರಸಿದ್ಧರಾಗಿರುವ ಜೈನುಲ್ ಅಬೆದಿನ್ ಅವರು ಟ್ರೆಡ್‌ಮಿಲ್‌ನಲ್ಲಿ 12 ಗಂಟೆಗಳ ಕಾಲ ನಿರಂತರವಾಗಿ ಓಡುವ ಮೂಲಕ ಸಾಹಸ ಮೆರೆದಿದ್ದಾರೆ.
12 ಗಂಟೆಯಲ್ಲಿ 66 ಕಿ.ಮೀ. ಓಡಿರುವ ಉತ್ತರ ಪ್ರದೇಶದ ಮೊರದಾಬಾದ್‌ನ ಅಬೆದಿನ್, ವಿಶ್ವದಾಖಲೆಯ ಗಿನ್ನೆಸ್ ಪುಸ್ತಕದಲ್ಲಿ ತಮ್ಮ ಹೆಸರು ಸೇರಬಹುದೆಂದ ನಿರೀಕ್ಷೆಯಲ್ಲಿದ್ದಾರೆ.
ಜನರಿಗೆ ಫಿಟ್ನೆಸ್ ಜಾಗೃತಿ ಮೂಡಿಸುವ ಉದ್ದೇಶದಿಂದ ಟ್ರೆಡ್‌ಮಿಲ್‌ನಲ್ಲಿ ಅರ್ಧ ದಿನದ ನಿರಂತರ ಓಟ ಪ್ರದರ್ಶನ ನೀಡಿದ್ದಾಗಿ ಅಬೆದಿನ್ ಹೇಳಿದ್ದಾರೆ.
'ಇಂಡಿಯನ್ ಬುಕ್ ಆಫ್ ರೆಕಾರ್ಡ್'ಸಾಧನೆ:
ಅಬೆದಿನ್ ಅವರು 2018ರಲ್ಲಿ, ಮಹಿಳೆಯರಿಗೆ ಗೌರವ ಸಲ್ಲಿಸಬೇಕು ಎಂಬ ಸಂದೇಶವನ್ನು ಹೊತ್ತು ದೆಹಲಿಯ ಇಂಡಿಯಾ ಗೇಟ್‌ನಿಂದ ಓಟ ಆರಂಭಿಸಿದ್ದರು. ಆಗ್ರಾ, ಜೈಪುರಕ್ಕೆ ಹೋಗಿ ದೆಹಲಿಗೆ ವಾಪಸಾಗಿದ್ದರು. ಈ ಓಟವನ್ನು 7 ದಿನ ಮತ್ತು 22 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದರು. ಈ ಮೂಲಕ 'ಇಂಡಿಯನ್ ಬುಕ್ ಆಫ್ ರೆಕಾರ್ಡ್'ನಲ್ಲಿ ತಮ್ಮ ಹೆಸರನ್ನು ಛಾಪಿಸಿದ್ದಾರೆ.
ಕೊರೊನಾ ಸೋಂಕು ವ್ಯಾಪಿಸಿದ ಸಂದರ್ಭ ಅಬೆದಿನ್ ಅವರು ಪೊಲೀಸರಿಗೆ ಗೌರವ ಸಲ್ಲಿಸಬೇಕು ಎಂಬ ಸಂದೇಶವನ್ನು ಹೊತ್ತು 50 ಕಿ.ಮೀ. ಓಡಿದ್ದರು.
ಶನಿವಾರ ಅಬೆದಿನ್ ಅವರು ಟ್ರೆಡ್‌ಮಿಲ್‌ನಲ್ಲಿ ನಿರಂತರವಾಗಿ ಓಡುತ್ತಿದ್ದಾಗ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಅಧಿಕಾರಿಗಳು ಶುಭ ಕೋರಿದ್ದರು. ಶನಿವಾರ ರಾತ್ರಿ ಓಟವನ್ನು ನಿಲ್ಲಿಸಿದಾಗ ಬೆಂಬಲಿಗರು ಹೂಗಳ ದಳಗಳನ್ನು ಸುರಿದು ಅಭಿನಂದಿಸಿದರು.
ಜೈನುಲ್ ಅಬೆದಿನ್ ಅವರು ಹಲವಾರು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ ಮತ್ತು 'ಮೊರದಾಬಾದ್ ಎಕ್ಸ್‌ಪ್ರೆಸ್' ಎಂಬ ಹೆಸರನ್ನು ಗಳಿಸಿದ್ದಾರೆ.