ಕಾಸರಗೋಡು: ಜ.23ರಂದು ನಡೆಯುವ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲು 1243 ಬೂತ್ ಗಳನ್ನು ಸ್ಥಾಪಿಸಲಾಗುವುದು. ಜಿಲ್ಲೆಯಲ್ಲಿ ಐದು ವರ್ಷದೊಳಗಿನ 115399 ಮಕ್ಕಳಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ವರ್ಷ ಶೇ.98.8 ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗಿತ್ತು. ಈ ಬಾರಿ ಶೇ.100ರಷ್ಟು ಯಶಸ್ಸು ಸಾಧಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಪೋಲಿಯೊ ಬೂತ್‍ಗಳನ್ನು ಸ್ಥಾಪಿಸಲಾಗುವುದು. ಅತಿಥಿ ಕಾರ್ಮಿಕರು ಮತ್ತು ಎಸ್ಟಿ ಕಾಲನಿಗಳಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ವಿಶೇಷ ವ್ಯವಸ್ಥೆ ಮಾಡಲಾಗುವುದು.
ಜಿಲ್ಲಾ ಟಾಕ್ಸ್ ಪೋರ್ಸ್ ಪಡೆಯ ಪೂರ್ವಭಾವೀ ಸಭೆಯ ಅಧ್ಯಕ್ಷತೆಯನ್ನು ಆರ್‍ಡಿಒ ಅತುಲ್ ಸ್ವಾಮಿನಾಥ್ ವಹಿಸಿದ್ದರು. ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ ಅವರು ಪಲ್ಸ್ ಪೊಲಿಯೊ ಕಾರ್ಯಕ್ರಮ ಹಾಗೂ ವಿವಿಧ ಇಲಾಖೆಗಳ ಜವಾಬ್ದಾರಿಗಳ ಕುರಿತು ವಿವರಿಸಿದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಸ್ವಾಗತಿಸಿ, ಜಿಲ್ಲಾ ಎಂಸಿಎಚ್ ಪ್ರಭಾರ ಅಧಿಕಾರಿ ತಂಗಮಣಿ ಎನ್.ಜಿ.ವಂದಿಸಿದರು.