ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಲ್ಲಿ ಪರಿಷ್ಕರಣೆ ಆಗಿರುವ ದರ ಮತ್ತು ಕೆಲವು ಪ್ರಕ್ರಿಯಾ ನಿಯಮಗಳು ಜನವರಿ 1ರಿಂದ ಜಾರಿಗೆ ಬರಲಿವೆ. ಪಾದರಕ್ಷೆ ಮತ್ತು ಜವಳಿ ವಲಯದ ತೆರಿಗೆಯಲ್ಲಿ ಆಗಿರುವ ಪರಿಷ್ಕರಣೆಯೂ ಮುಂದಿನ ಶನಿವಾರದಿಂದ ಚಾಲನೆಗೊಳ್ಳಲಿದೆ.
ಇ-ಕಾಮರ್ಸ್ ಸಂಸ್ಥೆಗಳು ಒದಗಿಸುವ ಸೇವೆಗಳಿಗೂ ತೆರಿಗೆ ಚಾಲ್ತಿಗೆ ಬರಲಿದೆ. ಅಂದರೆ, ಆಪ್ಗಳ ಬುಕ್ ಮಾಡುವ ಕಾರು ಅಥವಾ ಆಟೊರಿಕ್ಷಾ ಸೇವೆಗೆ ಶೇ. 5ರಷ್ಟು ತೆರಿಗೆ ಕಟ್ಟುಬೇಕು. ಈ ಮೊದಲು ಇಂಥ ಸೇವೆಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿತ್ತು. ಇದರಿಂದ ಓಲಾ, ಉಬರ್ನಂತಹ ಇ-ಟ್ಯಾಕ್ಸಿ ಸೇವೆಗಳು ದುಬಾರಿ ಆಗಲಿವೆ. ಜತೆಗೆ ಆಪ್ಗಳ ಮೂಲಕ ತರಿಸಿಕೊಳ್ಳುವ ಆಹಾರಕ್ಕೂ ಶೇ. 5 ಸೇವಾ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಆಹಾರ ವಿತರಣಾ ಆಪ್ಗಳಾದ ಸ್ವಿಗ್ಗಿ, ಜೊಮ್ಯಾಟೊಗಳು ಗ್ರಾಹಕರಿಂದ ತೆರಿಗೆ ವಸೂಲು ಮಾಡಬೇಕಾಗುತ್ತದೆ ಮತ್ತು ಇದಕ್ಕೆ ರಸೀದಿ ನೀಡುವುದು ಕಡ್ಡಾಯವಾಗಲಿದೆ.
ಐಟಿ ರಿಟರ್ನ್ಸ್ಗೆ 31 ಕಡೆಯ ದಿನ: 2021-22ನೇ ಸಾಲಿನ ಆದಾಯ ತೆರಿಗೆ ವಿವರ (ಐಟಿ ರಿಟರ್ನ್ಸ್) ಸಲ್ಲಿಸಲು ಡಿಸೆಂಬರ್ 31 ಕಡೆಯ ದಿನವಾಗಿದೆ. ಗಡುವಿನ ನಂತರ ಸಲ್ಲಿಸುವ ಐಟಿ ರಿಟರ್ನ್ಸ್ಗೆ ದಂಡಶುಲ್ಕ ಬೀಳಲಿದೆ. ಹೀಗಾಗಿ ಐಟಿ ರಿಟರ್ನ್ಸ್ ಸಲ್ಲಿಸುವಂತೆ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡುವುದನ್ನು ಚುರುಕುಗೊಳಿಸಿದೆ. ಆನ್ಲೈನ್ನಲ್ಲಿ ಕಡೆಯ ದಿನದ ದಟ್ಟಣೆ ತಪ್ಪಿಸಲು ಕೂಡಲೇ ರಿಟರ್ನ್ಸ್ ಸಲ್ಲಿಸಿ ಎಂಬ ಒಕ್ಕಣೆಯನ್ನು ಈ ಸಂದೇಶ ಒಳಗೊಂಡಿದೆ.
ಪ್ರಕ್ರಿಯಾ ನಿಯಮದಲ್ಲಿ ಬದಲಾವಣೆ: ಪ್ರಕ್ರಿಯಾ ನಿಯಮದಲ್ಲಿ ಜಿಎಸ್ಟಿ ಮರುಪಾವತಿಗೆ ಆಧಾರ್ ದೃಢೀಕರಣ ಕಡ್ಡಾಯವಾಗಲಿದೆ. ಇದರಿಂದ ವಂಚನೆಗೆ ಕಡಿವಾಣ ಬೀಳಲಿದೆ. ವ್ಯಾಪಾರಿಗಳು ಹಿಂದಿನ ತಿಂಗಳ ತೆರಿಗೆ ಪಾವತಿಸದೆ ಜಿಎಸ್ಟಿಆರ್-3ಬಿ ಸಲ್ಲಿಸಿದರೆ ಮರುಕ್ಷಣದಲ್ಲೇ ಜಿಎಸ್ಟಿಆರ್-1 ಸಲ್ಲಿಕೆಗೆ ತಡೆ ಬೀಳಲಿದೆ. ಪ್ರಸ್ತುತ ವ್ಯಾಪಾರಿಗಳು ಎರಡು ತಿಂಗಳು ಜಿಎಸ್ಟಿಆರ್-3ಬಿ ಸಲ್ಲಿಸದಿದ್ದಲ್ಲಿ ಜಿಎಸ್ಟಿಆರ್-1 ಸಲ್ಲಿಸುವುದಕ್ಕೆ ನಿರ್ಬಂಧ ಇದೆ. ಪರಿಷ್ಕೃತ ನಿಯಮದಿಂದ ನಕಲಿ ಬಿಲ್ ಸೃಷ್ಟಿಗೆ ತಡೆ ಆಗಲಿದೆ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್ ಮಾಡಲು ಜಿಎಸ್ಟಿಆರ್-1ರಲ್ಲಿ ಅಧಿಕ ವಹಿವಾಟು ನಡೆದಿರುವುದನ್ನು ತೋರಿಸುವುದಕ್ಕೂ ಕಡಿವಾಣ ಬೀಳಲಿದೆ.