ನವದೆಹಲಿ: ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಂತಹ ಸಾಲ ಮರುಪಾವತಿಸದೆ ತಲೆ ಮರೆಸಿಕೊಂಡಿರುವ ಉದ್ಯಮಿಗಳ ಆಸ್ತಿ ಮಾರಾಟದಿಂದ ರೂ. 13,109.17 ಕೋಟಿಯನ್ನು ಬ್ಯಾಂಕ್ ಗಳು ವಶಪಡಿಸಿಕೊಂಡಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ತಿಳಿಸಿದರು.
ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳಿಂದ ಪ್ರತಿಭಟನೆ ನಡುವೆಯೂ ಲೋಕಸಭೆಯಿಂದ ಅಂಗೀಕರಿಸಲ್ಪಟ್ಟ ಪೂರಕ ಅನುದಾನ ಬೇಡಿಕೆ (ಎರಡನೇ ಬ್ಯಾಚ್ ) ಮೇಲಿನ ಚರ್ಚೆಯಲ್ಲಿ ಪ್ರತಿಕ್ರಿಯಿಸಿದ ಸಚಿವರು, ಜಾರಿ ನಿರ್ದೇಶನಾಲಯ ನೀಡಿರುವ ಮಾಹಿತಿಯಂತೆ, ಜುಲೈ 2021ರಲ್ಲಿ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಆಸ್ತಿ ಮಾರಾಟದಿಂದ ಒಟ್ಟಾರೇ, ರೂ. 13,109,17 ಕೋಟಿ ಹಣವನ್ನು ಬ್ಯಾಂಕ್ ಗಳು ವಶಕ್ಕೆ ಪಡೆದಿರುವುದಾಗಿ ಹೇಳಿದರು.
ಇತ್ತೀಚಿಗೆ ಜುಲೈ 16, 2021ರಲ್ಲಿ ವಿಜಯ್ ಮಲ್ಯ ಮತ್ತಿತರರಿಗೆ ಸೇರಿದ ಆಸ್ತಿ ಮಾರಾಟದಿಂದ ರೂ. 792 ಕೋಟಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ತೈಲಬೆಲೆ ಹೆಚ್ಚಳ ಸೇರಿದಂತೆ ವಿವಿಧ ವಿಷಯಗಳ ಕುರಿತಂತೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಖಾದ್ಯ ತೈಲ ಮತ್ತಿತರ ಅವಶ್ಯಕ ಸರಕುಗಳ ದರ ಇಳಿಕೆಗೆ ಸರ್ಕಾರ ಕ್ರಮ ಕೈಗೊಂಡಿದೆ. ಅವಶ್ಯಕ ಸರಕುಗಳಿಗಾಗಿ ಸಚಿವರ ಗುಂಪಿನ ಮೂಲಕ ಕ್ರಮ ಕೈಗೊಳ್ಳಲಾಗಿದೆ. ಖಾದ್ಯ ತೈಲ ಬೆಲೆ ಮತ್ತಿತರ ಅವಶ್ಯಕ ಸಾಮಾಗ್ರಿಗಳ ಬೆಲೆಯಲ್ಲಿನ ತೊಂದರೆಯನ್ನು ಪರಿಹರಿಸಲಾಗುವುದು ಎಂದರು.
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳ ಜೊತೆಗೂಡಿ ಕಳೆದ ಏಳು ವರ್ಷಗಳಲ್ಲಿ ಸುಮಾರು 5.49 ಲಕ್ಷ ಕೋಟಿ ರೂಪಾಯಿಯನ್ನು ವಸೂಲಿ ಮಾಡಲಾಗಿದೆ. ಆದ್ದರಿಂದ ಸುಸ್ತಿದಾರರು, ತಲೆಮರೆಸಿಕೊಂಡಿದ್ದಾರೆ. ಅವರ ಹಣವನ್ನು ವಶಕ್ಕೆ ಪಡೆದು ಸಾರ್ವಜನಿಕ ಕ್ಷೇತ್ರದ ಬ್ಯಾಂಕಿನಲ್ಲಿಟ್ಟಿದ್ದೇವೆ. ಆದ್ದರಿಂದ ಬ್ಯಾಂಕುಗಳು ಈಗಲೂ ಸುರಕ್ಷಿತವಾಗಿದ್ದು, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ರೇವಣಿದಾರರು ಹಣ ಸುಭದ್ರವಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.