ತಿರುವನಂತಪುರಂ: ಪೊಕ್ಸೊ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಸುಳ್ಳು ಪ್ರಕರಣದಿಂದ ಮಹಿಳೆಯೊಬ್ಬರಿಗೆ ಕೊನೆಗೂ ನ್ಯಾಯ ದೊರಕಿದೆ. 13 ವರ್ಷದ ಅಪ್ರಾಪ್ತ ಮಗನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂಬ ಆರೋಪದಿಂದ ಬಂಧನವಾಗಿದ್ದ ಮಹಿಳೆಯನ್ನು ಪೊಕ್ಸೊ ನ್ಯಾಯಾಲಯ ಖುಲಾಸೆಗೊಳಿಸಿದೆ.
ಮೂರು ವರ್ಷಗಳ ಕಾಲ ಸ್ವಂತ ಮಗನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂದು 2020ರ ಡಿಸೆಂಬರ್ನಲ್ಲಿ ಮಹಿಳೆಯೊಬ್ಬಳನ್ನು ಕೇರಳ ಪೊಲೀಸರು ಬಂಧಿಸಿದ್ದರು. ಇದಾದ ಬಳಿಕ ಐಜಿ ಅರ್ಶಿತಾ ಅತ್ತಲ್ಲೂರು ನೇತೃತ್ವದ ವಿಶೇಷ ತನಿಖಾ ತಂಡವು ತನಿಖೆ ನಡೆಸಿ ತಾಯಿ ವಿರುದ್ಧ ಸುಳ್ಳು ಆರೋಪ ಮಾಡಿರುವುದನ್ನು ಪತ್ತೆ ಹಚ್ಚಿತ್ತು. ತಂಡವು ಸಲ್ಲಿಸಿದ ತನಿಖಾ ವರದಿಯ ಆಧಾರದ ಮೇಲೆ ಪೊಕ್ಸೊ ನ್ಯಾಯಾಲಯವು ಮಹಿಳೆಯ ವಿರುದ್ಧದ ಕಾನೂನು ಕ್ರಮಗಳನ್ನು ಶನಿವಾರ ವಜಾಗೊಳಿಸಿದೆ.
ಇದೇ ಸಂದರ್ಭದಲ್ಲಿ ಎಸ್‌ಐಟಿ ವರದಿ ವಿರುದ್ಧ ಮಹಿಳೆಯ ಪತಿ ಸಲ್ಲಿಸಿದ್ದ ಮನವಿಯನ್ನೂ ನ್ಯಾಯಾಲಯ ವಜಾಗೊಳಿಸಿದೆ. 2017 ರಿಂದ 2020ರ ಅವಧಿಯಲ್ಲಿ ತನ್ನ ತಾಯಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಮಗು ದೂರಿತ್ತು. ಇದರ ಆಧಾರದ ಮೇಲೆ ಕೇರಳದ ಕಡಕ್ಕಾವೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು 2020ರ ಡಿಸೆಂಬರ್ 28 ರಂದು ತಾಯಿಯನ್ನು ಬಂಧಿಸಿದರು. ಬಂಧನದ ನಂತರ ಅವರು ಒಂದು ತಿಂಗಳ ಜೈಲು ಶಿಕ್ಷೆಯನ್ನು ಸಹ ಅನುಭವಿಸಿದರು.
ನಂತರ ಹೈಕೋರ್ಟ್ ನಿರ್ದೇಶನದಂತೆ ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿತ್ತು. ಆಕೆಯ ಮಗನ ಹೇಳಿಕೆ ಮತ್ತು ನೀಡಿದ ದೂರು ಕಟ್ಟುಕಥೆ ಎಂದು ತಂಡವು ಪತ್ತೆಹಚ್ಚಿದೆ.