ಕೋಲ್ಕತ್ತ: ಕೋಲ್ಕತ್ತ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು, ಟಿಎಂಸಿ ಭಾರೀ ಮುನ್ನಡೆ ಸಾಧಿಸಿದ್ದರೆ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ಕೋಲ್ಕತ್ತ: ಕೋಲ್ಕತ್ತ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಹುತೇಕ ಪ್ರಕಟಗೊಂಡಿದ್ದು, ಟಿಎಂಸಿ ಭಾರೀ ಮುನ್ನಡೆ ಸಾಧಿಸಿದ್ದರೆ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ.
ಕೋಲ್ಕತ್ತದ 144 ವಾರ್ಡುಗಳ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಅದರಲ್ಲಿ ಈವರೆಗೆ 89 ಸ್ಥಾನಗಳನ್ನು ಟಿಎಂಸಿ ಗಿಟ್ಟಿಸಿಕೊಂಡಿದೆ.
ಸಂಜೆಯ ವೇಳೆಗೆ ಚುನಾವಣೆಯ ಸ್ಪಷ್ಟ ಫಲಿತಾಂಶ ಹೊರ ಬೀಳಲಿದೆ. ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಜನರು ನಮ್ಮ ಕೆಲಸಗಳನ್ನು ಮೆಚ್ಚಿಕೊಂಡಿದ್ದಾರೆ ಎನ್ನುವುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಬಿಜೆಪಿ, ಕಾಂಗ್ರೆಸ್, ಎಡಪಕ್ಷ ಈಗ ಎಲ್ಲಿವೇ? ಎಂದು ಪ್ರಶ್ನಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಬಿಜೆಪಿ ರಾಜಧಾನಿಯಲ್ಲೇ ನೆಲೆ ಕಂಡುಕೊಳ್ಳಲು ವಿಫಲವಾಗಿದ್ದು ಇದುವರೆಗಿನ ಮಾಹಿತಿ ಪ್ರಕಾರ 1 ಸ್ಥಾನ ಮಾತ್ರ ಗೆದ್ದುಕೊಂಡಿದ್ದು 3 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 2 ಹಾಗೂ ಪಕ್ಷೇತರರು 3 ವಾರ್ಡ್‌ಗಳಲ್ಲಿ ಗೆದ್ದಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 114 ಸ್ಥಾನಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ 5, ಎಡ ಪಕ್ಷಗಳು 15, ಬಿಜೆಪಿ 7 ವಾರ್ಡ್‌ಗಳಲ್ಲಿ ಗೆದ್ದಿತ್ತು. ಮೂವರು ಪಕ್ಷೇತರರು ಗೆದ್ದಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಹಿಂದಿನ ದಾಖಲೆಗಳನ್ನು ಮುರಿಯುವ ಮುನ್ಸೂಚನೆ ನೀಡಿದೆ. ಸತತ ಮೂರನೇ ಬಾರಿಗೆ ಟಿಎಂಸಿ ಕೆಎಂಸಿ ಅಧಿಕಾರದ ಗದ್ದುಗೆ ಹಿಡಿದಿದೆ.