ಉಪ್ಪಳ: ಪ್ರಮುಖ ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಮದ್ಯ ಸೇವನೆಯನ್ನು ಸಮಾಜದಿಂದ ಸಂಪೂರ್ಣವಾಗಿ ತೊಡೆದುಹಾಕುವ ಪ್ರಯತ್ನಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಮದ್ಯವರ್ಜನ ಶಿಬಿರ ಪರಿಣಾಮಕಾರಿಯಾಗಿ ಯಶಸ್ಸುಗಳಿಸುತ್ತಿರುವುದು ಈ ನೆಲದ ಪುಣ್ಯವಾಗಿದೆ. ಖಾವಂದರ ಸಾಮಾಜಿಕ ಕಳಕಳಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯವಾದುದು ಎಂದು ಶ್ರೀಕ್ಷೇತ್ರ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಬಿ.ಸಿ.ಟ್ರಸ್ಟ್ ಕಾಸರಗೋಡು ಇವುಗಳ ನೇತೃತ್ವದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ, ಪೈವಳಿಕೆ ವಲಯ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಪೈವಳಿಕೆ ಸೇ.ಸ.ಬ್ಯಾಂಕ್, ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಮಿತಿ ಪೈವಳಿಕೆ, ಪ್ರಗತಿಬಂಧು, ನವಜೀವನ ಸಮಿತಿಗಳು ಪೈವಳಿಕೆ ಮತ್ತು ಸುಂಕದಕಟ್ಟೆ ವಲಯ ಹಾಗೂ ವಿವಿಧ ಸಂಘಸಂಸ್ಥೆಗಳ ನೆರವಿನೊಂದಿಗೆ ಪೈವಳಿಕೆ ಲಾಲ್ ಬಾಗ್ ಕುಲಾಲ ಮಂದಿರದಲ್ಲಿ ಆಯೋಜಿಸಲಾದ 1498 ನೇ ಮದ್ಯವರ್ಜನ ಶಿಬಿರವನ್ನು ಶುಕ್ರವಾರ ಬೆಳಿಗ್ಗೆ ದೀಪ ಬೆಳಗಿಇಸ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು.
ಯುವ ಸಮಾಜವನ್ನು ಸಮರ್ಥವಾಗಿ ಮುನ್ನಡೆಸಲು ಮದ್ಯದಮಲಿನಿಂದ ಮುಕ್ತವಾದ ವ್ಯವಸ್ಥೆಗೆ ರೂಪು ನೀಡಬೇಕು. ವ್ಯಕ್ತಿ, ಕುಟುಂಬ, ಸಮಾಜ, ರಾಷ್ಟ್ರದ ಹಿತಕ್ಕೆ ಮಾರಕವಾದ ಅಪಸವ್ಯಗಳಿಂದ ಮುಕ್ತರಾಗುವಲ್ಲಿ, ಪ್ರಜ್ಞಾವಂತ ನಾಗರಿಕ ಸಮಾಜ ನಿರ್ಮಾಣಕ್ಕೆ ಶಿಬಿರ ರಹದಾರಿಯಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ ಬಾಗ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡು ಕಾಸರಗೋಡಿಗೂ ಗ್ರಾಮಾಭಿವೃದ್ದಿ ಯೋಜನೆಯನ್ನು ವಿಸ್ತರಿಸುವ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳ ಸಾಟಿ ಇಲ್ಲದ ಕೊಡುಗೆ ನೀಡಿದೆ. ಸಮಾಜದ ಎಲ್ಲಾ ವರ್ಗಗಳ ಸಹೃದಯರ ಸಹಕಾರದೊಂದಿಗೆ ಮದ್ಯವರ್ಜನ ಶಿಬಿರ ಆಯೋಜನೆಗೊಂಡಿದ್ದು, ಸಾಮಾಜಿಕ ಕಳಕಳಿಯ ಸಭ್ಯ ನಾಗರಿಕ ಸಮಾಜ ನಿರ್ಮಾಣ ಲಕ್ಷ್ಯವಾಗಿದೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಪೋಲೀಸ್ ಠಾಣಾಧಿಕಾರಿ ಮೊಹಮ್ಮದ್ ಅನ್ಸಾರ್,ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ನ ದ.ಕ. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಪೈವಳಿಕೆ ಗ್ರಾ.ಪಂ.ಅಧ್ಯಕ್ಷೆ ಜಯಂತಿ, ಬ್ಲಾ.ಪಂ.ಸದಸ್ಯೆ ಸರೋಜಾ ಆರ್.ಬಲ್ಲಾಳ್, ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಉಪಸ್ಥಿತರಿದ್ದು ಮಾತನಾಡಿದರು.
ಶ್ರೀಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಖೇಶ್ ಸ್ವಾಗತಿಸಿ ವ್ಯವಸ್ಥ|ಆಪನಾ ಸಮಿತಿ ಅ|ಧ್ಯಕ್ಷ ಮೋನಪ್ಪ ಶೆಟ್ಟಿ ಕಟ್ನಬೆಟ್ಟು ವಂದಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ವಿಭಾಗದ ನಿರ್ದೇಶಕ ತಿಮ್ಮಯ್ಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಸಿ.ಟ್ರಸ್ಟ್ ಪೈವಳಿಕೆ ವಲಯ ಮೇಲ್ವಿಚಾರಕ ಅನಿಲ್ ಕುಮಾರ್ ಪಿ ನಿರೂಪಿಸಿದರು. ಶಿಬಿರಾಧಿಕಾರಿ ದಿವಾಕರ ಸಹಕರಿಸಿದರು. ಶಿಬಿರ ಡಿ.31 ರಂದು ಸಮಾರೋಪಗೊಳ್ಳಲಿದ್ದು, 60 ಕ್ಕಿಂತಲೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ.