ನವದೆಹಲಿ: ಮಹಿಳೆಯರ ಮದುವೆ ವಯಸ್ಸಿನ ಮಿತಿಯನ್ನು 18ರಿಂದ 21 ವರ್ಷಕ್ಕೆ ಏರಿಸುವ ಪ್ರಸ್ತಾಪವನ್ನು ಬುಧವಾರ ಕೇಂದ್ರ ಸಂಪುಟ ಅಂಗೀಕರಿಸಿದೆ.
ಯುವತಿಯರ ಮದುವೆ ವಯಸ್ಸನ್ನು 18ವರ್ಷಕ್ಕೆ ನಿಗದಿಪಡಿಸಲಾಗಿದೆ. ಅದನ್ನು ಮರುಪರಿಶೀಲನೆ ಮಾಡಲಾಗುವುದು. ಇದಕ್ಕಾಗಿ ಒಂದು ಸಮಿತಿ ರಚಿಸಲಾಗುವುದು ಎಂದು 2020ರ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದರು.
ಒಂದೂವರೆ ವರ್ಷದ ಬಳಿಕ ಅದನ್ನೀಗ ಅನುಷ್ಠಾನಕ್ಕೆ ತರಲು ಕೇಂದ್ರ ಸಂಪುಟ ಮುಂದಡಿ ಇಟ್ಟಿದೆ. ದೇಶದಲ್ಲಿ ಇರುವ ಬಾಣಂತಿ-ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು, ಪೌಷ್ಟಿಕಾಂಶದ ಕೊರತೆ ನೀಗಿಸಲು ಮತ್ತು ಮಹಿಳೆಯರ ಮದುವೆ ವಯಸ್ಸಿನ ಮಿತಿ ಹೆಚ್ಚಿಸುವುದರಿಂದ, ಸಹಜವಾಗಿಯೇ ತಾಯ್ತನದ ವಯಸ್ಸಿನ ಮಿತಿಯೂ ಏರುತ್ತದೆ.
ಹೀಗಾಗಿ ಒಂದಷ್ಟು ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅದರ ಬಗ್ಗೆ ಪರಿಶೀಲಿಸಲು ಕೇಂದ್ರ ಸರ್ಕಾರ ಒಂದು ಟಾಸ್ಕ್ಫೋರ್ಸ್ ರಚಿಸಿತ್ತು. ಈ ಟಾಸ್ಕ್ ಫೋರ್ಸ್ನ ಶಿಫಾರಸ್ಸಿನ ಅನ್ವಯ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.