ಛತ್ತರ್‌ಪುರ (ಮ.ಪ್ರ.): ಮಧ್ಯಪ್ರದೇಶದ ಚತ್ತರ್‌ಪುರ ಸಮೀಪದ ಹಳ್ಳಿಯೊಂದರಲ್ಲಿ ಗುರುವಾರ ಒಂದೂವರೆ ವರ್ಷದ ಬಾಲಕಿ ಬೋರ್‌ವೆಲ್‌ಗೆ ಬಿದ್ದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿಯನ್ನು ರಕ್ಷಿಸಲು ಜಿಲ್ಲಾ ಮತ್ತು ಸೇನಾ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಬಾಲಕಿ ದಿವ್ಯಾಂಶಿ ತನ್ನ ತಂದೆಯ ಕೃಷಿ ಭೂಮಿಯಲ್ಲಿ ಆಟವಾಡುತ್ತಿದ್ದಾಗ ಚತ್ತರ್‌ಪುರ ಜಿಲ್ಲಾ ಕೇಂದ್ರದಿಂದ ಸುಮಾರು 32 ಕಿ.ಮೀ. ದೂರದಲ್ಲಿರುವ ಡೋನಿ ಗ್ರಾಮದಲ್ಲಿ ತೆರೆದ ಬೋರ್‌ವೆಲ್‌ಗೆ ಬಿದ್ದಳು ಎಂದು ಲುಗಾಸಿ ಪೊಲೀಸ್ ಪೋಸ್ಟ್ ಇನ್‌ಚಾರ್ಜ್ ಅತುಲ್ ಝಾ ತಿಳಿಸಿದ್ದಾರೆ.
15-20 ಅಡಿ ಆಳದಲ್ಲಿ ಬಾಲಕಿ ಸಿಲುಕಿಕೊಂಡಿದೆ ಎಂದು ಅವರು ಹೇಳಿದರು.
ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಯ ಸಹಾಯದಿಂದ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಬಾಲಕಿಯನ್ನು ಉಳಿಸುವ ಪ್ರಯತ್ನಗಳಲ್ಲಿ ಸಹಾಯ ಮಾಡಲು ಜಿಲ್ಲೆಯ ನೌಗಾಂವ್ ತಹಸಿಲ್‌ನಿಂದ ಸೇನಾ ತಂಡವೂ ಸ್ಥಳಕ್ಕೆ ತಲುಪಿದೆ ಎಂದು ಝಾ ಹೇಳಿದರು.
ಬೋರ್‌ವೆಲ್‌ನಲ್ಲಿ ಆಮ್ಲಜನಕವನ್ನು ಪೂರೈಸಲಾಗುತ್ತಿದ್ದು, ಮಗುವನ್ನು ರಕ್ಷಿಸಲು ಸಮಾನಾಂತರ ಹೊಂಡವನ್ನು ಅಗೆಯಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.
ತಹಸೀಲ್ದಾರ್ ಸುನೀತಾ ಸಹಾನಿ ಹಾಗೂ ನೌಗಾಂವ್ ಪೊಲೀಸ್ ಠಾಣೆ ಪ್ರಭಾರಿ ದೀಪಕ್ ಯಾದವ್ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.