ನವದೆಹಲಿ: ಓಮಿಕ್ರಾನ್ ಸೋಂಕು ಪತ್ತೆಯಾದ ನಂತರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ ಒಂದೇ ದಿನ 180 ಹೊಸ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 961ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ದೇಶದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 961 ಓಮಿಕ್ರಾನ್ ಕೇಸುಗಳು ವರದಿಯಾಗಿದ್ದು, 320 ಮಂದಿ ಸೋಂಕಿನಿಂದ ಗುಣಮುಖ ಹೊಂದಿದ್ದಾರೆ. ದೆಹಲಿಯಲ್ಲಿ ಇದುವರೆಗೆ ಅತ್ಯಧಿಕ 263 ಕೇಸುಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 252, ಗುಜರಾತ್ ನಲ್ಲಿ 97, ರಾಜಸ್ತಾನದಲ್ಲಿ 69, ಕೇರಳದಲ್ಲಿ 65 ಮತ್ತು ತೆಲಂಗಾಣದಲ್ಲಿ 62 ಕೇಸುಗಳು ವರದಿಯಾಗಿದೆ.
ಕೋವಿಡ್-19 ಪ್ರಕರಣಗಳ ದೈನಂದಿನ ಏರಿಕೆಯು ಸುಮಾರು 49 ದಿನಗಳ ನಂತರ 13 ಸಾವಿರ ದಾಟಿದೆ, ಒಟ್ಟು ಸೋಂಕಿತರ ಸಂಖ್ಯೆ 3 ಕೋಟಿಯ 48 ಲಕ್ಷದ 22 ಸಾವಿರದ 040 ಇದ್ದು, ಸಕ್ರಿಯ ಪ್ರಕರಣಗಳು 82 ಸಾವಿರದ 402 ಕ್ಕೆ ಏರಿದೆ ಎಂದು ಸರ್ಕಾರದ ವರದಿ ಹೇಳುತ್ತದೆ.
268 ಮಂದಿ ಕಳೆದ 24 ಗಂಟೆಗಳಲ್ಲಿ ಮೃತಪಡುವ ಮೂಲಕ ಒಟ್ಟು ಸಾವಿನ ಸಂಖ್ಯೆ 4 ಲಕ್ಷದ 80 ಸಾವಿರದ 860 ಕ್ಕೆ ಏರಿದೆ. ಕಳೆದ 63 ದಿನಗಳಿಂದ ಹೊಸ ಕೋವಿಡ್ ಸೋಂಕಿತರ ದೈನಂದಿನ ಹೆಚ್ಚಳವು 15 ಸಾವಿರಕ್ಕಿಂತ ಕಡಿಮೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ ಸಂಖ್ಯೆ 5 ಸಾವಿರದ 400 ಪ್ರಕರಣಗಳಷ್ಟು ಹೆಚ್ಚಳವಾಗಿದೆ.
268 ಹೊಸ ಸಾವುಗಳಲ್ಲಿ ಕೇರಳದಲ್ಲಿ 211 ಮತ್ತು ಮಹಾರಾಷ್ಟ್ರದಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 1,41,496, ಕೇರಳದಲ್ಲಿ 47,277, ಕರ್ನಾಟಕದಲ್ಲಿ 38,324, ತಮಿಳುನಾಡಿನಲ್ಲಿ 36,758, ದೆಹಲಿಯಲ್ಲಿ 25,107, ಉತ್ತರ ಪ್ರದೇಶದಲ್ಲಿ 22,915 ಮತ್ತು ಪಶ್ಚಿಮ ಬಂಗಾಳದಲ್ಲಿ 19,745 ಸೇರಿದಂತೆ ದೇಶದಲ್ಲಿ ಇದುವರೆಗೆ ಒಟ್ಟು 4,80,860 ಸಾವುಗಳು ವರದಿಯಾಗಿವೆ.