ತಿರುವನಂತಪುರಂ: 15 ವರ್ಷದ ಮಕ್ಕಳಿಬ್ಬರಿಗೆ ತಪ್ಪಾಗಿ ಕೋವಿಡ್-19 ಲಸಿಕೆ ನೀಡಲಾಗಿದ್ದು, ತತ್ಪರಿಣಾಮ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಿರುವನಂತಪುರಂ ನ ಗ್ರಾಮೀಣ ಭಾಗದಲ್ಲಿರುವ ಆರ್ಯನಾಡು ಎಂಬ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ.
10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಆರ್ಯನಾಡು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮುನ್ನೆಚ್ಚರಿಕಾ ಲಸಿಕೆ ತೆಗೆದುಕೊಳುವುದಕ್ಕೆ ತೆರಳಿದ್ದರು. ಆದರೆ ಮುನ್ನೆಚ್ಚರಿಕಾ ಲಸಿಕೆಯನ್ನು ನೀಡುವ ಬದಲಿಗೆ ವೈದ್ಯಕೀಯ ಸಿಬ್ಬಂದಿಗಳು ತಪ್ಪಾಗಿ ಕೋವಿಡ್-19 ಲಸಿಕೆಯನ್ನು ನೀಡಿದ್ದಾರೆ.
ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಿಬ್ಬಂದಿಗಳು ಇಬ್ಬರು ವಿದ್ಯಾರ್ಥಿನಿಯರ ಮೇಲೆ ನಿಗಾ ವಹಿಸಲು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಕ್ಕಳ ಆರೋಗ್ಯ ಈವರೆಗೂ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ವಿದ್ಯಾರ್ಥಿನಿಯರ ಪೋಷಕರಿಂದ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆರ್ಯನಾಡು ಪೊಲೀಸರು ತಿಳಿಸಿದ್ದಾರೆ.