ಹೈದರಾಬಾದ್: ಇಂಟ್ರಾನೇಸಲ್ ಕೋವಿಡ್-19 ಲಸಿಕೆಯ 3 ನೇ ಹಂತದ ಪ್ರಯೋಗಕ್ಕೆ ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಭಾರತದ ಔಷಧ ನಿಯಂತ್ರಕ (ಡಿಸಿಜಿಐ) ದಿಂದ ಅನುಮತಿ ಕೇಳಿದೆ.
ಇಂಟ್ರಾನೇಸಲ್ (ಬಿಬಿವಿ154) ಕೋವಿಡ್-19 ಲಸಿಕೆಯನ್ನು ಕೊರೋನಾ ವಿರುದ್ಧ ಬೂಸ್ಟರ್ ಡೋಸ್ ನ್ನಾಗಿ ಬಳಕೆ ಮಾಡಲು ಸಂಸ್ಥೆ ಉದ್ದೇಶಿಸಿದೆ. "ಅನುಮತಿ ಕೇಳಿ ಮನವಿ ಸಲ್ಲಿಸಲಾಗಿದೆ. ಅನುಮೋದನೆಗಾಗಿ ಕಾಯುತ್ತಿದ್ದೇವೆ, ಇಂಟ್ರಾನೇಸಲ್ ಲಸಿಕೆಯನ್ನು ಈಗಾಗಲೇ ಎರಡು ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿರುವವರಿಗೆ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಬೂಸ್ಟರ್ ಡೋಸ್ ನ್ನಾಗಿ ಇಂಟ್ರಾನೇಸಲ್ ನೀಡುವುದರಿಂದ ಸಾಮೂಹಿಕ ಲಸಿಕೆ ಅಭಿಯಾನಕ್ಕೆ ಸಹಕಾರಿಯಾಗಲಿದ್ದು, ರೋಗ ಹರಡುವಿಕೆ ತಡೆಗಟ್ಟುವುದು ಸಾಧ್ಯವಾಗಲಿದೆ. ಎರಡನೇ ಹಂತದ ಪ್ರಯೋಗ ಈಗಾಗಲೇ ನಡೆಸಲಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.
ಇಂಟ್ರಾ ಮಸ್ಕ್ಯುಲರ್ ಹಾಗೂ ನೇಸಲ್ ಸಂಯೋಜನೆಯಿಂದ ಈ ಲಸಿಕೆಯನ್ನು ತಯಾರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಕ ಸಂಸ್ಥೆ ಭಾರತ್ ಬಯೋಟೆಕ್ ನ ಲಸಿಕೆ ಕೋವ್ಯಾಕ್ಸಿನ್ ನ ಬಳಕೆಯ ಅವಧಿಯ ಮಿತಿಯನ್ನು ಉತ್ಪಾದನೆಯ ದಿನಾಂಕದಿಂದ 12 ತಿಂಗಳಿಗೆ ಏರಿಕೆ ಮಾಡಿದೆ. ಕೋವ್ಯಾಕ್ಸಿನ್ ನ ಮೊದಲ ಡೋಸ್ ಪಡೆದ 28 ದಿನಗಳಲ್ಲಿ ಎರಡನೇ ಡೋಸ್ ಪಡೆಯಬೇಕಿದೆ.