ನವದೆಹಲಿ: ಈಗ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಅಗತ್ಯವಿಲ್ಲ ಎಂದು ದೇಶದಲ್ಲಿ ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಸದಸ್ಯ ಡಾ. ಜಯ ಪ್ರಕಾಶ್ ಮುಳಿಯಿಲ್ ಹೇಳಿದ್ದಾರೆ. ಮಕ್ಕಳು ಚೆನ್ನಾಗಿದ್ದು, ಅವರಿಗೆ ಈಗ ಲಸಿಕೆಯ ಅಗತ್ಯವಿಲ್ಲ ಎಂದು ಸಮಿತಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.
ಕೋವಿಡ್-19 ಕಾರಣದಿಂದ 12 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಒಂದೇ ಒಂದು ಸಾವು ಪ್ರಕರಣಕ್ಕೆ ದೇಶ ಸಾಕ್ಷಿಯಾಗಿಲ್ಲ ಎಂದು ದೇಶದ ಸಾಂಕ್ರಾಮಿಕ ರೋಗ ತಜ್ಞರಲ್ಲಿ ಒಬ್ಬರಾದ ಮುಳಿಯಲ್ ಹೇಳಿದ್ದಾರೆ.
ಅನೇಕ ಕಂಪನಿಗಳು ವೈಜ್ಞಾನಿಕ ಪ್ರಯೋಗ ಪರೀಕ್ಷೆ ನಡೆಸುತ್ತಿದ್ದು, ದೇಶದಲ್ಲಿ 18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಲಸಿಕೆ ಆರಂಭ ಕುರಿತು ಯಾವುದೇ ಅಧಿಕೃತ ದಿನಾಂಕ ನಿಗದಿಯಾಗಿಲ್ಲ ಎಂದು ಡಿಸೆಂಬರ್ 8 ರಂದು ನಡೆದ ಪರಾಮರ್ಶನಾ ಸಭೆ ನಂತರ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು ಹೇಳಿಕೆ ನೀಡಿತ್ತು.
ಕಳೆದ ತಿಂಗಳು ನೀಡಿದ್ದ ವರದಿ ಪ್ರಕಾರ, ದೇಶಾದ್ಯಂತ ಸುಮಾರು 100 ರಾಷ್ಟ್ರಗಳು, ಮಕ್ಕಳಿಗೆ ಕೋವಿಡ್-19 ಲಸಿಕೆ ಅಭಿಯಾನವನ್ನು ವಿಸ್ತರಿಸಿತ್ತು. 5 ರಿಂದ 11 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಫೈಜರ್ -ಬಯೋ ಟೆಕ್ ಕೋವಿಡ್-19 ಲಸಿಕೆ ನೀಡಲು ಫ್ರಾನ್ಸ್ ಸೋಮವಾರ ಅನುಮೋದನೆ ನೀಡಿತ್ತು.
ಈ ಮಧ್ಯೆ ದೆಹಲಿಯಲ್ಲಿ ಮಂಗಳವಾರ 19 ಹೊಸ ಓಮಿಕ್ರಾನ್ ರೂಪಾಂತರ ಪ್ರಕರಣ ವರದಿಯಾಗಿದ್ದು, ದೇಶದಲ್ಲಿ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 202ಕ್ಕೆ ಏರಿಕೆಯಾಗಿದೆ.