ನವದೆಹಲಿ: ಸಾರ್ಸ್-ಕೋವ್-2ನ ಓಮಿಕ್ರಾನ್ ರೂಪಾಂತರದ 236ಕ್ಕೂ ಹೆಚ್ಚು ಕೋವಿಡ್-19 ರೋಗಿಗಳಲ್ಲಿ100ಕ್ಕೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಜೀನೋಮ್ ಸೀಕ್ವೆನ್ಸಿಂಗ್ ಆಧಾರದ ಮೇಲೆ ಒಮಿಕ್ರಾನ್ ರೂಪಾಂತರದ 236 ಪ್ರಕರಣಗಳನ್ನು ಭಾರತ ಪತ್ತೆ ಹಚ್ಚಿದೆ. ಭಾರತದಲ್ಲಿ ನವೆಂಬರ್ 22 ರಂದು ಓಮಿಕ್ರಾನ್ನ ಮೊದಲ ಪ್ರಕರಣ ವರದಿಯಾಗಿದೆ. ಎಲ್ಲಾ ಕೋವಿಡ್-19 ಪ್ರಕರಣಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸದ ಕಾರಣ ಒಮಿಕ್ರಾನ್ ಪ್ರಕರಣಗಳ ನಿಜವಾದ ಸಂಖ್ಯೆ ಹೆಚ್ಚಿರಬಹುದು ಎನ್ನಲಾಗ್ತಿದೆ.
ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 65 ಓಮಿಕ್ರಾನ್ ರೂಪಾಂತರದ ಪ್ರಕರಣಗಳು ದಾಖಲಾಗಿವೆ. ನಂತರ ದೆಹಲಿಯಲ್ಲಿ 64, ತೆಲಂಗಾಣ 24, ಕರ್ನಾಟಕ 31 (ಇಂದಿನ 12 ಪ್ರಕರಣಗಳು ಸೇರಿದಂತೆ), ರಾಜಸ್ಥಾನ 21 ಮತ್ತು ಕೇರಳ 15. ಗುರುವಾರ ಬೆಳಗ್ಗೆ 8 ಗಂಟೆಗೆ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತದಲ್ಲಿ 7,495 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 3.47 ಕೋಟಿಗೆ ಏರಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸೋಂಕಿನಿಂದ ಮೂವತ್ತೈದು ಜನರು ಚೇತರಿಸಿಕೊಂಡಿದ್ದು, ದೆಹಲಿಯಲ್ಲಿ 23 ಮತ್ತು ರಾಜಸ್ಥಾನದಲ್ಲಿ 19 ಜನರು ಚೇತರಿಸಿಕೊಂಡಿದ್ದಾರೆ.
ಕೋವಿಡ್-19 ಸಕ್ರಿಯ ಪ್ರಕರಣಗಳು 78,291 ರಷ್ಟಿದ್ದು, 24 ಗಂಟೆಗಳ ಅವಧಿಯಲ್ಲಿ 101 ಸಕ್ರಿಯ ಪ್ರಕರಣಗಳ ಹೆಚ್ಚಳ ದಾಖಲಾಗಿದೆ ಎಂದು ಸಚಿವಾಲಯದ ಅಂಕಿಅಂಶಗಳು ತೋರಿಸಿವೆ.