ನವದೆಹಲಿ: ಭಾರತ ಸೇರಿದಂತೆ ಜಗತ್ತಿನಾದ್ಯಂತ ಓಮಿಕ್ರಾನ್ ಸೋಂಕಿನ ಭೀತಿ ಹೆಚ್ಚಾಗುತ್ತಿದೆ. ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 5 ಸಾವಿರದ 326 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, 453 ಮಂದಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 6,563 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 79 ಸಾವಿರದ 097 ಆಗಿದೆ. ಹೊಸ ಸೋಂಕಿತರ ಸಂಖ್ಯೆ ಮೊನ್ನೆ ದೇಶಾದ್ಯಂತ 7,081 ಇದ್ದರೆ ನಿನ್ನೆ ಕಡಿಮೆಯಾಗಿದೆ. 8 ಸಾವಿರದ 043 ಮಂದಿ ನಿನ್ನೆ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕೋವಿಡ್ ನಿಂದ ಇದುವರೆಗೆ ದೇಶದಲ್ಲಿ 3 ಕೋಟಿಯ 41 ಲಕ್ಷದ 95 ಸಾವಿರದ 060 ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 4 ಲಕ್ಷದ 78 ಸಾವಿರದ 007ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕೋವಿಡ್ ವೈರಸ್ ನ ವಿರುದ್ಧ ಹೋರಾಡಲು ಲಸಿಕಾ ಅಭಿಯಾನ ಆರಂಭವಾದ ನಂತರ ಇಲ್ಲಿಯವರೆಗೆ 138 ಕೋಟಿಯ 34 ಲಕ್ಷ ಡೋಸ್ ಲಸಿಕೆ ವಿತರಣೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ದೇಶದಲ್ಲಿಯೇ ಫಲಾನುಭವಿಗಳಿಗೆ ಶೇಕಡಾ 100ರಷ್ಟು ಲಸಿಕೆ ನೀಡಿದ ಮೊದಲ ರಾಜ್ಯವಾಗಿ ಹಿಮಾಚಲ ಪ್ರದೇಶ ಹೊರಹೊಮ್ಮಿದ್ದು ಆರೋಗ್ಯ ಇಲಾಖೆಯ ಕಾರ್ಯಕರ್ತರ ಪರಿಶ್ರಮದಿಂದ ಇದು ಸಾಧ್ಯವಾಗಿದೆ.
ಇದುವರೆಗೆ ದೇಶದಲ್ಲಿ 66 ಕೋಟಿಯ 61 ಲಕ್ಷದ 26 ಸಾವಿರದ 659 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು ನಿನ್ನೆ ಒಂದೇ ದಿನ 10 ಲಕ್ಷದ 14 ಸಾವಿರದ 079 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.
200 ಓಮಿಕ್ರಾನ್ ಕೇಸು: ಇನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವರದಿಯಾದಂತೆ ಇದುವರೆಗೆ 200 ಓಮಿಕ್ರಾನ್ ಕೇಸುಗಳು ಪತ್ತೆಯಾಗಿವೆ. ಯಾವ ರಾಜ್ಯದಲ್ಲಿ ಎಷ್ಟಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.