ನವದೆಹಲಿ: 2021-22ರಲ್ಲಿ ಸಂಭವಿಸಿದ ಚಂಡಮಾರುತ, ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಸುಮಾರು 2,000 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಲ ಶಕ್ತಿ ಸಚಿವಾಲಯ ಮಾಹಿತಿ ಪ್ರಕಾರ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 489 ಜನರು ಸಾವನ್ನಪ್ಪಿದ್ದರೆ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ತಲಾ 162 ಜನರು ಅಸುನೀಗಿದ್ದಾರೆ. 2021-22ರಲ್ಲಿ ಚಂಡಮಾರುತ, ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಒಟ್ಟಾರೇ, 2,002 ಜನರು ಸಾವನ್ನಪ್ಪಿರುವುದಾಗಿ ಮಾಹಿತಿಯಲ್ಲಿ ಹೇಳಲಾಗಿದೆ.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ನವಾಮಿ ಗಂಗಾ ಕಾರ್ಯಕ್ರಮದಡಿ ಇಲ್ಲಿಯವರೆಗೂ 357 ಯೋಜನೆಗಳನ್ನು 30,780 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಲಾಗಿದೆ. ಈ ಪೈಕಿ 178 ಯೋಜನೆಗಳು ಪೂರ್ಣಗೊಂಡಿರುವುದಾಗಿ ತಿಳಿಸಿದರು.
ದಿನಕ್ಕೆ 4,952 ಮಿಲಿಯನ್ ಲೀಟರ್ ತ್ಯಾಜ್ಯ ಸಂಸ್ಕರಣಾ ಘಟಕ ಸಾಮರ್ಥ್ಯದ ಪುನರುಜ್ಜೀವನ ಮತ್ತು 5,212 ಕಿಮಿ ಒಳಚರಂಡಿ ನಿರ್ಮಾಣಕ್ಕಾಗಿ ರೂ. 24,249 ಕೋಟಿ ರೂ ವೆಚ್ಚದೊಂದಿಗೆ 157 ಒಳಚರಂಡಿ ಮೂಲಸೌಕರ್ಯ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ, ಈ ಪೈಕಿ 74 ಯೋಜನೆಗಳು ಪೂರ್ಣಗೊಂಡಿವೆ ಎಂದು ಶೇಖಾವತ್ ಲಿಖಿತ ಉತ್ತರದಲ್ಲಿ ಸದನಕ್ಕೆ ಮಾಹಿತಿ ನೀಡಿದರು.