ಹಿಂದೆಯೆಲ್ಲಾ ಬಹುತೇಕ ಕಾಯಿಲೆಗಳನ್ನು ಮನೆಮದ್ದಿನಿಂದಲೇ ಗುಣಪಡಿಸುತ್ತಿದ್ದರು. ಸಣ್ಣ-ಪುಟ್ಟ ಕಾಯಿಲೆಗಳಿಗೆ ಆಸ್ಪತ್ರೆಗೆ ಹೋಗುತ್ತಿರಲಿಲ್ಲ, ಮನೆಮದ್ದೇ ಮಾಡುತ್ತಿದ್ದರು, ಆಧುನಿಕತೆ ಬೆಳೆದಂತೆ ಜನರು ಅಲೋಪತಿ ಕಡೆ ಹೆಚ್ಚು ಆಸಕ್ತಿ ತೋರಿಸಲಾರಂಭಿಸಿದರು. ಎಷ್ಟೋ ಮನೆಮದ್ದುಗಳು ಈಗೀನ ಕಾಲದವರಿಗೆ ಗೊತ್ತೇ ಇಲ್ಲ, ಮನೆಮದ್ದುಗಳಿಂದ ಗುಣಮುಖವಾಗಬಹುದಾದ ಚಿಕ್ಕ-ಪುಟ್ಟ ಸಮಸ್ಯೆಗಳಿಗೂ ಅಲೋಪತಿ ಮದ್ದು ಸೇವಿಸಲಾರಂಭಿಸಿದರು.
ಆದರೆ ಕೊರೊನಾ ಬಂದ ಮೇಲೆ ಪರಿಸ್ಥಿತಿ ಬದಲಾಯ್ತು, ಜನರು ಮನೆಮದ್ದು, ಕಷಾಯಗಳನ್ನು ಹೆಚ್ಚಾಗಿ ಬಳಸಲಾರಂಭಿಸಿದರು. ಅಮೃತ ಬಳ್ಳಿ, ತುಳಸಿ ಮುಂತಾದ ಮನೆಮದ್ದುಗಳ ಮಹತ್ವ ಕೆಲವರಿಗೆ ಅರಿತಿದ್ದೇ ಈ ಕೊರೊನಾ ಕಾಲದಲ್ಲಿ ಎಂದು ಹೇಳಿದರೆ ತಪ್ಪಾಗಲಾರದು. ಜನರು ಅನೇಕ ಸಮಸ್ಯೆಗಳಿಗೆ ಮನೆಮದ್ದುಗಳಿಗಾಗಿ ಸರ್ಚ್ ಮಾಡಿದ್ದಾರೆ. ಕೊರೊನಾ 2ನೇ ಅಲೆಯ ಸಂದರ್ಭದಲ್ಲಿ ಇತರ ಕ ಸಣ್ಣ-ಪುಟ್ಟ ಕಾಯಿಲೆ ಬಂದ್ರೆ ಆಸ್ಪತ್ರೆಗೆ ಹೋಗಿ ತೋರಿಸಲು ಸಾಧ್ಯವಾಗುತ್ತಿರಲಿಲ್ಲ, ಹಲ್ಲು ನೋವು, ಹೊಟ್ಟೆ ನೋವು ಹೀಗೆ ಅನೇಕ ಸಮಸ್ಯೆಗಳಿಗೆ ಮನೆಮದ್ದು ಮಾಡಿ ಶಮನ ಕಂಡು ಕೊಂಡಿದ್ದಾರೆ.2021ರಲ್ಲಿ ಈ ಸಮಸ್ಯೆಗಳಿಗೆ ಮನೆಮದ್ದುಗಾಹಿ ಅತೀ ಹೆಚ್ಚು ಸರ್ಚ್ ಮಾಡಿದ್ದಾರಂತೆ:
1. ಬೇಧಿಗೆ ಮನೆಮದ್ದು : ಬೇಧಿಗೆ ಮನೆಮದ್ದು ಯಾವುದೆಂದು ಅತೀ ಹೆಚ್ಚಾಗಿ ಸರ್ಚ್ ಮಾಡಿದ್ದಾರೆ. ಬೇಧಿಯಾದಾಗ ಮಾಡಬೇಕಾದ ಮನೆಮದ್ದುಗಳೆಂದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗದಿರಲು ತುಂಬಾ ನೀರು ಕುಡಿಯುವುದು, ಟೀ ಪುಡಿ ಮತ್ತು ಸಕ್ಕರೆ ಹುರಿದು ಅದಕ್ಕೆ 1/4 ಲೋಟ ನೀರು ಹಾಕಿ ಕುಡಿಯುವುದು, ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಉಪ್ಪು, 2 ಚಮಚ ಸಕ್ಕರೆ ಹಾಕಿ ಮಿಕ್ಸ್ ಮಾಡಿ ಕುಡಿಯುವುದು, ಮೊಸರನ್ನ ಸೇವನೆ ಇವೆಲ್ಲಾ ಬೇಧಿ ನಿಲ್ಲಲು, ಸುಸ್ತು ಕಡಿಮೆಯಾಗಲು ಸಹಕಾರಿ. ಬೇಧಿಯಾದಾಗ ಎಣ್ಣೆ ಪದಾರ್ಥಗಳನ್ನು ತಿನ್ನಬಾರದು, ಖಾರದ ಆಹಾರಗಳನ್ನು ತಿನ್ನಬಾರದು, ಕೃತಕ ಸಿಹಿ ಪದಾರ್ಥಗಳನ್ನು ಸೇವಿಸಬಾರದು.
2. ಹೊಟ್ಟೆ ನೋವಿಗೆ ಮನೆಮದ್ದು : ಬೇಧಿಗೆ ಮನೆಮದ್ದು ಬಳಿಕ ಜನರು ಅತೀ ಹೆಚ್ಚು ಸರ್ಚ್ ಮಾಡಿರುವುದು ಹೊಟ್ಟೆ ನೋವಿಗೆ ಮನೆಮದ್ದು. ತುಂಬಾ ಹಹೊಟ್ಟೆ ನೋವು ಬಂದರೆ ಮನೆಮದ್ದು ಮಾಡುವ ಬದಲಿಗೆ ಆಸ್ಪತ್ರೆಗೆ ಹೋಗುವುದು ಸೂಕ್ತ. ದೇಹದ ಉಷ್ಣಾಂಶ ಹೆಚ್ಚಾದಾಗ, ಮುಟ್ಟಿನ ಸಮಯದಲ್ಲಿ ಕಾಣಿಸುವ ಹೊಟ್ಟೆ ನೋವಾದರೆ ಜೀರಿಗೆ ನೀರು ಸಹಕಾರಿ. ಹೊಟ್ಟೆ ನೋವು ಬಂದಾಗ ಗ್ಯಾಸ್ಟ್ರಿಕ್ ಉತ್ಪತ್ತಿ ಮಾಡುವ ಆಹಾರಗಳನ್ನು, ತರಕಾರಿಗಳನ್ನು ಸೇವಿಸಬೇಡಿ.
3. ಜ್ವರಕ್ಕೆ ಮನೆಮದ್ದು ಜ್ವರಕ್ಕೆ ಮನೆಮದ್ದು ಯಾವುದೆಂದು ಜನರು ಸರ್ಚ್ ಮಾಡಿದ್ದಾರೆ. ಜ್ವರ ಬಂದರೆ ಆಸ್ಪತ್ರೆಗೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಜ್ವರ ಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರಿಗೆ ತೋರಿಸಬೇಕು. ಇನ್ನು ಔಷಧಿ ಜೊತೆಗೆ ಸಾಕಷ್ಟು ನೀರು ಕುಡಿಯುವುದು, ಸೂಪ್ ಕುಡಿಯುವುದು, ಗಂಜಿ ಸೇವನೆ ಇವೆಲ್ಲಾ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ.
4. ಹಲ್ಲು ನೋವಿಗೆ ಮನೆಮದ್ದು ಕೊರೊನಾ ಸಮಯದಲ್ಲಿ ಹಲ್ಲು ನೋವು ಬಂದಾಗ ಇತ್ತ ಆಸ್ಪತ್ರೆಗೆ ಹೋಗಲಾರದೆ, ಸೂಕ್ತ ಔಷಧಿ ಯಾವುದೆಂದು ತಿಳಿಯದೆ ತುಂಬಾ ಜನ ಬಳಲಿದ್ದಾರೆ, ತುಂಬಾ ಹಲ್ಲು ನೋವು ಇದ್ದರೆ ದಂತ ವೈದ್ಯರಿಗೆ ತೋರಿಸಬೇಕು. ಚಿಕ್ಕ-ಪುಟ್ಟ ನೋವಿಗೆ ಲವಂಗ, ಸಿಬೆ ಎಲೆ, ವೆನಿಲ್ಲಾ ರಸ, ಪೆಪ್ಪರ್‌ಮಿಂಟ್ ಟೀ ಬ್ಯಾಗ್, ಕೋಲ್ಡ್ ಕಂಪ್ರಸ್, ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಇವೆಲ್ಲಾ ನೋವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಕಾರಿ.
5. ಮೂಲವ್ಯಾಧಿಗೆ ಮನೆಮದ್ದು ಮೂಲವ್ಯಾಧಿ ಸಮಸ್ಯೆಯಿದ್ದರೆ ಕೂರಲೂ ಆಗದೆ, ಇತ್ತ ನೋವು ಅನುಭವಿಸಲೂ ಸಾಧ್ಯವಾಗದೆ ಒದ್ದಾಡುತ್ತಾರೆ. ಇದರ ಬಗ್ಗೆಯೂ ಜನರು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ. ಮೂಲಂಗಿ ಸೇವನೆ, ಬ್ರೊಕೋಲಿ, ದುಂಡು ಮೆಣಸಿನಕಾಯಿ, ಸೌತೆಕಾಯಿ, ಪಿಯರ್ಸ್, ಸೇಬು, ರಾಸ್‌ಬೆರ್ರಿ, ಬಾಳೆಹಣ್ಣು ಇಂಥ ಆಹಾರಗಳ ಸೇವನೆ ಒಳ್ಳೆಯದು.
6. ಗ್ಯಾಸ್ಟ್ರಿಕ್ ಸಮಸ್ಯೆಗೆ ಮನೆಮದ್ದು ಬಹುತೇಕ ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇರುತ್ತದೆ, ಹೊಟ್ಟೆಯೊಳಗೆ ಗ್ಯಾಸ್ ಉತ್ಪತ್ತಿಯಾದಾಗ ಹೊಟ್ಟೆ ನೋವು ಉಂಟಾಗುವುದು. ಇದನ್ನು ತಡೆಗಟ್ಟಲು ಯೋಗ ಒಳ್ಳೆಯದು, ಕೆಲವೊಂದು ಗಿಡ ಮೂಲಿಕರ ಮತ್ತು ಆ್ಯಪಲ್ ಸಿಡರ್ ವಿನೆಗರ್ ಒಳ್ಳೆಯದು. ಜನರು ಈ ಕುರಿತು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ.