ಲಖನೌ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ತಮ್ಮ ಪಕ್ಷದ ಮಹಿಳಾ ಕೇಂದ್ರಿತ 'ಪಿಂಕ್ ಪ್ರಣಾಳಿಕೆ'ಯನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ.
ವಾಸ್ತವವಾಗಿ, ದೇಶದ ಚುನಾವಣಾ ಇತಿಹಾಸದಲ್ಲಿ ಈ ರೀತಿಯ ಮಹಿಳಾ ಕೇಂದ್ರಿತ ಪ್ರಣಾಳಿಕೆ ಬಿಡುಗಡೆ ಮಾಡಿದ ಏಕೈಕ ಪಕ್ಷ ಕಾಂಗ್ರೆಸ್. ಕಾಂಗ್ರೆಸ್ ಮಹಿಳಾ ಅಭ್ಯರ್ಥಿಗಳಿಗೆ ಶೇಕಡಾ 40 ರಷ್ಟು ಪಕ್ಷದ ಟಿಕೆಟ್‌ಗಳನ್ನು ಘೋಷಿಸಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹೇಳಿದ್ದಾರೆ.
ಮಹಿಳಾ ಅಭ್ಯರ್ಥಿಗಳಿಗೆ ಅಧಿಕಾರ ಕಾಗದಕ್ಕೆ ಸೀಮಿತವಾಗಬಾರದ. ಬದಲಿಗೆ ಅದು ಕಾರ್ಯರೂಪಕ್ಕೆ ಬರಬೇಕು ಕಾಂಗ್ರೆಸ್ ನಾಯಕಿ ಹೇಳಿದ್ದಾರೆ.
ಈ ದೇಶಕ್ಕೆ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಮತ್ತು ಮೊದಲ ಮಹಿಳಾ ಮುಖ್ಯಮಂತ್ರಿ ಸುಚೇತಾ ಕೃಪಾಲಾನಿ ಅವರಿಗೆ ಅಧಿಕಾರ ನೀಡಿದ ಏಕೈಕ ಪಕ್ಷ ಕಾಂಗ್ರೆಸ್ ಎಂದು ಅವರು ಸಮರ್ಥಿಸಿಕೊಂಡರು.
ಪ್ರಪಂಚದಾದ್ಯಂತ ರಾಜಕೀಯದಲ್ಲಿ ಇತರ ರಾಷ್ಟ್ರಗಳು ಮಹಿಳಾ ಪ್ರಾತಿನಿಧ್ಯವನ್ನು ಕಡಿಮೆ ಹೊಂದಿದ್ದಾಗ ನಮ್ಮ ದೇಶವು ಮಹಿಳಾ ಪ್ರಧಾನಿಯನ್ನು ಹೊಂದಿತ್ತು ಎಂದು ಪ್ರಿಯಾಂಕಾ ಹೇಳಿದರು.
ಕಾಂಗ್ರೆಸ್ 'ಪಿಂಕ್ ಪ್ರಣಾಳಿಕೆ'ಯ ಪ್ರಮುಖ ಭರವಸೆಗಳು
- ಮಹಿಳಾ ಅಭ್ಯರ್ಥಿಗಳಿಗೆ ಶೇ.40 ರಷ್ಟು ಮೀಸಲಾತಿ
- ಸಾರಿಗೆಯಂತಹ ಪುರುಷ ಪ್ರಧಾನ ಇಲಾಖೆಯ ಉದ್ಯೋಗಗಳಲ್ಲಿ ಮಹಿಳೆಯರಿಗೆ ವಿಶೇಷ ಕೋಟಾ
- ಶೇ. 50 ರಷ್ಟು ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ತೆರಿಗೆ ವಿನಾಯ್ತಿ
- ಮಹಿಳಾ ಸ್ವಸಹಾಯ ಗುಂಪುಗಳಿಗೆ ಅಗ್ಗದ ಸಾಲ
- ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ ಮತ್ತು ಸಂಕಷ್ಟದ ವಿರುದ್ಧ ನೆರವು ಪಡೆಯಲು ಮಹಿಳೆಯರಿಗೆ ಜಿಲ್ಲಾ ಮಟ್ಟದ ಸಹಾಯವಾಣಿ.
- ರಾಜ್ಯದ 25 ದೊಡ್ಡ ನಗರಗಳಲ್ಲಿ ಆಧುನಿಕ ಸೌಕರ್ಯಗಳೊಂದಿಗೆ ಕೆಲಸ ಮಾಡುವ ಮಹಿಳೆಯರಿಗಾಗಿ ಹಾಸ್ಟೆಲ್‌ಗಳು,
- ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಕ್ಕಳ ಆರೈಕೆ ಕೇಂದ್ರಗಳು
- 14 ವರ್ಷಕ್ಕಿಂತ ಮೇಲ್ಪಟ್ಟ ಬಾಲಕಿಯರ ಪಠ್ಯಕ್ರಮದಲ್ಲಿ ಲೈಂಗಿಕ ಶಿಕ್ಷಣ, ಬಾಲ್ಯ ವಿವಾಹ, ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಸೇರ್ಪಡೆ
- ಪ್ರತಿ ಮನೆಗೆ ವರ್ಷಕ್ಕೆ ಮೂರು ಗ್ಯಾಸ್ ಸಿಲಿಂಡರ್