ನವದೆಹಲಿ: ಭಾರತೀಯ ಕಾಂಗ್ರೆಸ್ ಪಕ್ಷಕ್ಕೆ ನೂತನ ಅಧ್ಯಕ್ಷರ ನೇಮಕ ಮುಂದಿನ ವರ್ಷ 2022ರ ಸೆಪ್ಟೆಂಬರ್ ನಲ್ಲಿ ನಡೆಯಲಿದೆ. ಪಕ್ಷದಲ್ಲಿ ಚುನಾವಣೆ ನಡೆಸಲು ತಯಾರಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ.
ಆಗಸ್ಟ್-ಸೆಪ್ಟೆಂಬರ್ ಮಧ್ಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂದು ಕಳೆದ ಅಕ್ಟೋಬರ್ ನಲ್ಲಿ ಪಕ್ಷ ಘೋಷಣೆ ಮಾಡಿತ್ತು. ಕಳೆದ ತಿಂಗಳು ನವೆಂಬರ್ ನಲ್ಲಿ ಪಕ್ಷದಲ್ಲಿ ಸದಸ್ಯತ್ವ ಅಭಿಯಾನ ಆರಂಭಗೊಂಡಿತ್ತು.
ಸದಸ್ಯತ್ವ ಅಭಿಯಾನ ಮಾರ್ಚ್ 31ರವರೆಗೆ ಇದ್ದು, ಮತ್ತೆ ಒಂದು ತಿಂಗಳು ವಿಸ್ತರಣೆಯಾಗುವ ಸಾಧ್ಯತೆಯಿದೆ. ಅಧ್ಯಕ್ಷರ ಚುನಾವಣೆ ಸೆಪ್ಟೆಂಬರ್ ನಲ್ಲಿ ನಡೆಸಲಾಗುವುದು, ಇಡೀ ಪ್ರಕ್ರಿಯೆ ಸಮಯಕ್ಕೆ ಸರಿಯಾಗಿ ಮುಕ್ತಾಯವಾಗಲಿದೆ ಎಂದರು.
ಅಧ್ಯಕ್ಷರ ಆಯ್ಕೆಯ ನಂತರ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನವನ್ನು ಕರೆಯಲಾಗುವುದು, ಅದರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಆಯ್ಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಎಷ್ಟು ಮಂದಿ ಸ್ಪರ್ಧಿಸುತ್ತಾರೆ ಎಂಬುದನ್ನು ನೋಡಿಕೊಂಡು ಅದರ ಆಧಾರದ ಮೇಲೆ ಚುನಾವಣೆ ಹೇಗೆ ನಡೆಯಲಿದೆ ಎಂದು ನಿರ್ಧರಿಸಲಾಗುವುದು ಎಂದು ಮಿಸ್ತ್ರಿ ಹೇಳಿದರು.
2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ ಪಕ್ಷವು ಪೂರ್ಣ ಸಮಯದ ಅಧ್ಯಕ್ಷರಿಲ್ಲದೆ ನಡೆಯುತ್ತಿದೆ. ಸೋನಿಯಾ ಗಾಂಧಿ ಅವರು ಅದೇ ವರ್ಷ ಆಗಸ್ಟ್ ನಲ್ಲಿ ಹಂಗಾಮಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ, ಹೊಸ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವ ಕುರಿತು ಮಾತುಕತೆ, ಚರ್ಚೆಗಳು ನಡೆಯುತ್ತಲೇ ಇದೆ.