ನವದೆಹಲಿ: ಪಾಕಿಸ್ತಾನದಿಂದ ಭಾರತದ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದ 20 ಯೂಟ್ಯೂಬ್ ಚಾನೆಲ್ ಗಳು ಮತ್ತು ಎರಡು ವೆಬ್ ಸೈಟ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ನಿಷೇಧಗೊಂಡ ಚಾನೆಲ್ ಗಳ ಪೈಕಿ 15 ಚಾನೆಲ್ ಗಳು ನಯಾ ಪಾಕಿಸ್ತಾನ್ ಗ್ರೂಪ್ ನ ಒಡೆತನದಲ್ಲಿದ್ದರೆ, ಉಳಿದವು ನೇಕೆಡ್ ಟ್ರುತ್, 48 ನ್ಯೂಸ್ ಮತ್ತು ಜುನೈದ್ ಹಲಿಮ್ ಅಫೀಶಿಯಲ್ ಮೊದಲಾದ ಚಾನೆಲ್ ಗಳಾಗಿವೆ. ಈ ಯೂಟ್ಯೂಬ್ ಚಾನೆಲ್ ಗಳ ಒಟ್ಟು ಚಂದಾದಾರರು ಸುಮಾರು 35 ಲಕ್ಷ ಜನರಿದ್ದು ಭಾರತಕ್ಕೆ ಸಂಬಂಧಿಸಿದಂತೆ ವಿಷಯಗಳ ಬಗ್ಗೆ 500 ಮಿಲಿಯನ್ ಗಿಂತಲೂ ಹೆಚ್ಚಿನ ಬಾರಿ ವೀಕ್ಷಣೆ ಕಂಡುಬಂದಿದೆ.
ಇಂಗ್ಲಿಷ್ ದೈನಿಕವೊಂದಕ್ಕೆ ಮಾಹಿತಿ ಮತ್ತು ಪ್ರಸಾರ ಖಾತೆ ಕಾರ್ಯದರ್ಶಿ ಅಪೂರ್ವ ಚಂದ್ರ ಯೂಟ್ಯೂಬ್ ಸಂಸ್ಥೆ ಮತ್ತು ಟೆಲಿಕಾಂ ಇಲಾಖೆಗಳಿಗೆ ಪತ್ರ ಬರೆದು, ಈ ಯೂಟ್ಯೂಬ್ ಚಾನೆಲ್ ಗಳ ವಿಷಯಗಳು ಭಾರತ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆಯುನ್ನುಂಟುಮಾಡುವುದರಿಂದ ತಕ್ಷಣವೇ ಪ್ರಸಾರ ತಡೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ಚಾನೆಲ್ ಗಳು ಪಾಕಿಸ್ತಾನದ ಐಎಸ್ ಐ ನೆರವಿನ ಮೂಲಕ ಪ್ರಸಾರವಾಗುತ್ತಿವೆ. ಭಾರತ ವಿರೋಧಿ ಪ್ರಚಾರ ವೆಬ್‌ಸೈಟ್‌ಗಳನ್ನು ನಿಷೇಧಿಸಲು ಐಟಿ ನಿಯಮಗಳು, 2021 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿರುವುದು ಇದೇ ಮೊದಲ ಬಾರಿ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.