ನವದೆಹಲಿ: ಸದ್ಯ ಕಾನೂನಿನ ಅನ್ವಯ ಯುವತಿಯರು ಮದುವೆಯಾಗುವುದಿದ್ದರೆ ವಯಸ್ಸು ಕನಿಷ್ಠ 18 ಆಗಬೇಕಿತ್ತು. ಆದರೆ ಇದನ್ನೀಗ 21ಕ್ಕೆ ಏರಿಸಲಾಗಿದೆ. ವಯಸ್ಸನ್ನು ಹೆಚ್ಚಳ ಮಾಡಿರುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಶೀಘ್ರದಲ್ಲಿ ಕಾನೂನು ರೂಪದಲ್ಲಿ ಜಾರಿಗೆ ಬರಲಿದ್ದು, ಯುವತಿಯರ ಮದುವೆಯ ವಯಸ್ಸು ಕನಿಷ್ಠ 21 ಆಗಲಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ದೇಶದಲ್ಲಿ ಇರುವ ಬಾಣಂತಿ-ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಲು, ಪೌಷ್ಟಿಕಾಂಶದ ಕೊರತೆ ನೀಗಿಸಲು ಮತ್ತು ಮಹಿಳೆಯರ ಮದುವೆ ವಯಸ್ಸಿನ ಮಿತಿ ಹೆಚ್ಚಿಸುವುದರಿಂದ, ಸಹಜವಾಗಿಯೇ ತಾಯ್ತನದ ವಯಸ್ಸಿನ ಮಿತಿಯೂ ಏರುವ ಹಿನ್ನೆಲೆಯಲ್ಲಿ ಮದುವೆಯ ವಯಸ್ಸನ್ನು ಹೆಚ್ಚಳ ಮಾಡಬೇಕಿದೆ ಎಂದಿದ್ದರು ಪ್ರಧಾನಿ ಮೋದಿ. ಮಹಿಳೆಯರ ಮದುವೆಯ ಕನಿಷ್ಠ ವಯಸ್ಸಿನ ಪರಾಮರ್ಶೆ ಹಾಗೂ ತಾಯಿಯ ಆರೋಗ್ಯದ ಮೇಲೆ ಅದರ ಪರಿಣಾಮದ ಬಗ್ಗೆ ಅಧ್ಯಯನ ನಡೆಸಲು ಆರು ತಿಂಗಳೊಳಗಾಗಿ ಕಾರ್ಯಪಡೆಯೊಂದನ್ನು ರಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಕಳೆದ ವರ್ಷ ಘೋಷಿಸಿದ್ದರು.
ಮದುವೆಯ ವಯಸ್ಸನ್ನು 21 ವರ್ಷ ಮಾಡಿದರೆ, ಅದರಿಂದ ಆಗುವ ಸಾಧಕ ಬಾಧಕಗಳ ಕುರಿತು ಚರ್ಚೆಗೆ ಕೇಂದ್ರ ಸರ್ಕಾರ ಒಂದು ಕಾರ್ಯಪಡೆ (ಟಾಸ್ಕ್ಫೋರ್ಸ್) ರಚಿಸಿತ್ತು. ಸಮತಾ ಪಕ್ಷದ ಮಾಜಿ ಸದಸ್ಯೆ ಜಯಾ ಜೇಟ್ಲಿ ಇದರ ನೇತೃತ್ವ ವಹಿಸಿದ್ದರು. ನೀತಿ ಆಯೋಗದ ಡಾ.ವಿ.ಕೆ.ಪೌಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ , ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಕಾನೂನು ಇಲಾಖೆಯ ಸಿಬ್ಬಂದಿ ಕೂಡ ಈ ಕಾರ್ಯಪಡೆಯಲ್ಲಿ ಇದ್ದರು. ಹಲವಾರು ತಜ್ಞರ ಜತೆಗೆ ಹಾಗೂ ಯುವ ವಯಸ್ಸಿನ ಮಹಿಳೆಯರೊಂದಿಗೆ ಆಳವಾಗಿ ಚರ್ಚಿಸಿದ ನಂತರ ಮದುವೆ ವಯಸ್ಸಿನ ಮಿತಿ ಏರಿಕೆಗೆ ಶಿಫಾರಸು ಮಾಡಲಾಗಿದೆ. ಕಾರ್ಯಪಡೆಯ ಶಿಫಾರಸಿನ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಇದೀಗ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ಕ್ಕೆ ತಿದ್ದುಪಡಿ ತರಲಾಗುತ್ತದೆ. ವಿಶೇಷ ವಿವಾಹ ಕಾಯ್ದೆ ಮತ್ತು ಹಿಂದೂ ವಿವಾಹ ಕಾಯ್ದೆ, 1955 ರಂತಹ ವೈಯಕ್ತಿಕ ಕಾನೂನುಗಳಿಗೂ ತಿದ್ದುಪಡಿ ತರಲಾಗುವುದು.
ಮಹಿಳೆಯರ ಮದುವೆಯ ವಯಸ್ಸನ್ನು ಹೆಚ್ಚಿಸಿದ ಪ್ರಸ್ತಾವ ಜುಲೈ 31ರೊಳಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಲ್ಲಿಕೆಯಾಗುವ ಸಾಧ್ಯತೆ ಇದೆ. ನಂತರ ಇದು ಕಾನೂನು ರೂಪ ಪಡೆಯಲಿದೆ. 1949ರಲ್ಲಿ ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 15ಕ್ಕೆ ಏರಿಸಲಾಗಿತ್ತು. 1978ರಲ್ಲಿ ಇದನ್ನು 18ಕ್ಕೆ ಏರಿಸಲಾಗಿತ್ತು. ಇದೀಗ 43 ವರ್ಷಗಳ ಬಳಿಕ ವಯಸ್ಸನ್ನು ಏರಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.