ನವದೆಹಲಿ: ಭಾರತ-ರಷ್ಯಾ ನಡುವಿನ 21 ನೇ ವಾರ್ಷಿಕ ಶೃಂಗಸಭೆಯ ಭಾಗವಾಗಿ ಡಿ.06 ರಂದು ಪ್ರಧಾನಿ ನರೇಂದ್ರ ಮೋದಿ-ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ದೆಹಲಿಯ ಹೈದರಾಬಾದ್ ಹೌಸ್ ನಲ್ಲಿ ದ್ವಿಪಕ್ಷೀಯ ಸಭೆ ನಡೆದಿದ್ದು 2019 ರ ಬ್ರಿಕ್ಸ್ ಶೃಂಗಸಭೆಯ ಪಾರ್ಶ್ವದಲ್ಲಿ ಭೇಟಿ ಮಾಡಿದ್ದ ಬಳಿಕ ಮೋದಿ-ಪುಟಿನ್ ಅವರ ಮೊದಲ ಭೇಟಿ ಇದಾಗಿದೆ. ಇದಕ್ಕೂ ಮುನ್ನ ಉಭಯ ನಾಯಕರೂ 6 ದೂರವಾಣಿ ಕರೆಗಳು ಹಾಗೂ ಹಲವು ವರ್ಚ್ಯುಯಲ್ ಶೃಂಗಸಭೆಗಳಲ್ಲಿ ಭಾಗಿಯಾಗಿದ್ದರು.
ಇದಕ್ಕೂ ಮುನ್ನ 2+2 ಸಚಿವರ ದ್ವಿಪಕ್ಷೀಯ ಸಭೆ ನಡೆದಿತ್ತು. ಭಾರತಕ್ಕೆ ಎಕೆ-203 ಅಸಾಲ್ಟ್ ರೈಫಲ್ ಗಳ ಪೂರೈಕೆಗೆ ಡಿ.06 ರಂದು ಉಭಯ ರಾಷ್ಟ್ರಗಳೂ ಸಹಿ ಹಾಕಿದವು.
ಈ ಪಾಲುದಾರಿಕೆ ಉಭಯ ರಾಷ್ಟ್ರಗಳಿಗೂ ಪ್ರಯೋಜನಕಾರಿಯಾಗಿರಲಿದೆ. ಉಭಯ ದೇಶಗಳ ನಡುವಿನ ವಾಣಿಜ್ಯ, ವ್ಯಾಪಾರ ವಹಿವಾಟುಗಳು ಉತ್ತಮವಾಗಿದೆ. ಇಂಧನ, ನಾವಿನ್ಯತೆ, ಬಾಹ್ಯಾಕಾಶ ಹಾಗೂ ಕೋವಿಡ್-19 ಲಸಿಕೆ ಉತ್ಪಾದನೆ, ಔಷಧ ಉತ್ಪಾದನೆ ಕ್ಷೇತ್ರದಲ್ಲಿ ಒಪ್ಪಂದಗಳು ಸಕ್ರಿಯವಾಗಿ ಅಭಿವೃದ್ಧಿಯಾಗುತ್ತಿದೆ ಎಂದು ಪುಟಿನ್ ಹೇಳಿದ್ದಾರೆ.