ಕಾಸರಗೋಡು: ಪ್ರತಿಷ್ಠಿತ ಚಿನ್ನಾಭರಣ ಮಾರಾಟ ಸಂಸ್ಥೆಯ ಕೇರಳ ಮತ್ತು ಕರ್ನಾಟಕದ ವಿವಿಧ ಶಾಖೆಗಳಿಂದ 2.28ಕೋಟಿ ರೂ. ಮೌಲ್ಯದ ವಜ್ರದ ಆಭರಣ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಂಸ್ಥೆಯ ವಜ್ರಾಭರಣ ಮೇಲ್ವಿಚಾರಕ ಮಂಗಳೂರು ನಿವಾಸಿ ಮಹಮ್ಮದ್ ಫಾರೂಕ್ ವಿರುದ್ಧ ಈ ಕೇಸು ದಾಖಲಾಗಿದೆ. ಚಿನ್ನದಂಗಡಿಯ ಆಡಿಟಿಂಗ್ ನಡೆದಾಗ ಭಾರಿ ಮೌಲ್ಯದ ವಜ್ರಾಭರಣ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಮಧ್ಯೆ ಮಹಮ್ಮದ್ ಫಾರೂಕ್ ನಾಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿತ್ತು.
ಪೊಲೀಸರು ಕೇಸು ದಾಖಲಿಸಿಕೊಂಡ ಬೆನ್ನಿಗೆ ಸಂಸ್ಥೆ ಸಾಮಾಜಿಕ ಜಾಲ ತಾಣಗಳ ಮೂಲಕ ಆರೋಪಿ ಫೋಟೋ ಅಳವಡಿಸಿ ಲುಕೌಟ್ ನೋಟೀಸ್ ಜಾರಿಗೊಳಿಸಿದೆ. ಆರೋಪಿ ಪತ್ತೆಗೆ ಸಹಕರಿಸಿದವರಿಗೆ ಬಹುಮಾನ ನೀಡುವುದಾಗಿಯೂ ಪ್ರಕಟಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದುವರೆ ವರ್ಷದಿಂದ ಸ್ಟಾಕ್ ಚೆಕ್ ನಡೆಸದಿರುವುದನ್ನು ಬಂಡವಾಳವಾಗಿಸಿಕೊಂಡ ಆರೋಪಿ ವಜ್ರ ಅಪಹರಿಸಿದ್ದಾನೆ. ಜ್ಯುವೆಲ್ಲರಿಯಲ್ಲಿ ದಾಸ್ತಾನು ಲೆಕ್ಕಾಚಾರ ಆರಂಭಿಸುತ್ತಿದ್ದಂತೆ ತಲೆಮರೆಸಿಕೊಂಡಿರುವುದಾಗಿ ಸಂಸ್ಥೆ ಪದಾಧಿಕಾರಿಗಳು ಪೊಲೀಸರಿಗೆ ತಿಳಿಸಿದ್ದಾರೆ.