ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್ ರೂಪಾಂತರಿ ಕೋರೋನಾ ಸೋಂಕು ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದು, ಜಗತ್ತಿನ ಬರೊಬ್ಬರಿ 24 ದೇಶಗಳಲ್ಲಿ ಈ ಮಾರಕ ಓಮಿಕ್ರಾನ್ ರೂಪಾಂತರಿ ಕೋರೋನಾ ಸೋಂಕಿನ ಸೋಂಕಿತರು ಪತ್ತೆಯಾಗಿದ್ದಾರೆ.
ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದ್ದು, '2 ಡಜನ್ ಗೂ ಅಧಿಕ ದೇಶಗಳಲ್ಲಿ ಈ ಹೊಸ ಓಮಿಕ್ರಾನ್ ಕೊರೊನಾ ರೂಪಾಂತರಿ ಸೋಂಕು ಪ್ರಕರಣಗಳು ವರದಿಯಾಗಿದೆ. ಅಂತೆಯೇ ಈ ಓಮಿಕ್ರಾನ್ ರೂಪಾಂತರಿ ಸೋಂಕು ಇರುವ ದೇಶಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ನಿನ್ನೆಯಷ್ಟೇ ಅಮೆರಿಕದಲ್ಲೂ ಈ ಓಮಿಕ್ರಾನ್ ರೂಪಾಂತರಿ ಸೋಂಕು ಪತ್ತೆಯಾಗಿತ್ತು. ಆ ಮೂಲಕ ಈ ಪಟ್ಟಿಗೆ ಅಮೆರಿಕ ಕೂಡ ಸೇರ್ಪಡೆಯಾಗಿದ್ದು, ಈ ಪಟ್ಟಿಗೆ ಸೇರ್ಪಡೆಯಾದ 24ನೇ ದೇಶವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮೂಲಗಳು ತಿಳಿಸಿವೆ.
ಈ ಕುರಿತು ಜಿನೀವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ WHOನ ಆರೋಗ್ಯ ತುರ್ತು ಕಾರ್ಯಕ್ರಮದ COVID-19 ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಖೋವ್ (Maria Van Kerkhove), ಹೊಸ ರೂಪಾಂತರವು ಎಷ್ಟು ಬೇಗನೆ ಹರಡುತ್ತದೆ ಮತ್ತು ಅದು ಎಷ್ಟು ತೀವ್ರವಾಗಿರುತ್ತದೆ ಎಂಬುದರ ಕುರಿತು ವಿಜ್ಞಾನಿಗಳು ಶೀಘ್ರದಲ್ಲೇ ಮಾಹಿತಿ ನೀಡುವ ನಿರೀಕ್ಷೆಯಿದೆ. ಇದು "ಆರಂಭಿಕ ದಿನಗಳು" ಆಗಿರುವಾಗ, ಕೆಲವು ರೋಗಿಗಳು ಸೌಮ್ಯವಾದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬುದಕ್ಕೆ ಕೆಲವು ಸೂಚನೆಗಳಿವೆ. ನಾವು ದಿನಗಳಲ್ಲಿ ಪ್ರಸರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಹೊಂದಲು ಬಯಸುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಓಮಿಕ್ರಾನ್ ರೂಪಾಂತರಿ ಚಿಕಿತ್ಸೆಯಲ್ಲಿ ಲಸಿಕೆಗಳ ಮಹತ್ವದ ಕುರಿತು ಮಾತನಾಡಿದ ಅವರು, ಡೆಲ್ಟಾ ರೂಪಾಂತರಕ್ಕಿಂತ ಓಮಿಕ್ರಾನ್ ಪರಿಣಾಮಕಾರಿತ್ವದಲ್ಲಿ ಕಡಿತವಿದ್ದರೂ ಲಸಿಕೆಗಳು ಕಾರ್ಯನಿರ್ವಹಿಸುವುದಿಲ್ಲ ಎಂದು ಸೂಚಿಸಲು ಯಾವುದೇ ಸೂಚನೆ ಇಲ್ಲ. ಈ ಬಗ್ಗೆ ಸೂಕ್ತ ಸಂಶೋಧನೆಗಳು ನಡೆಯುತ್ತಿದ್ದು ಅವುಗಳ ವರದಿ ಬಂದ ಬಳಿಕ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದರು. ಅಲ್ಲದೆ ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಓಮಿಕ್ರಾನ್ ರೂಪಾಂತರಿಯನ್ನು ಕಳವಳಕಾರಿ ರೂಪಾಂತರ ಎಂದು ಘೋಷಣೆ ಮಾಡಿದೆ. ಅದಾಗ್ಯೂ ಲಸಿಕೆ ಪಡೆಯುವುದು ಉತ್ತಮ ಆಯ್ಕೆಯಾಗಿದ್ದು, ಏಕೆಂದರೆ ಅದು ನಿಮ್ಮ ಜೀವವನ್ನು ಉಳಿಸುತ್ತದೆ ಎಂದು ಹೇಳಿದರು.
ದಕ್ಷಿಣ ಆಫ್ರಿಕಾ ಕಳಕಳಿಯನ್ನು ಮೆಚ್ಚಿದ WHO
ಇದೇ ವೇಳೆ ಓಮಿಕ್ರಾನ್ ರೂಪಾಂತರಿ ಪತ್ತೆ ವಿಚಾರವಾಗಿ ದಕ್ಷಿಣ ಆಫ್ರಿಕಾ ಕಳಕಳಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸುತ್ತದೆ ಎಂದು ಹೇಳಿದ ಕೆರ್ಖೋವ್, 'ದಕ್ಷಿಣ ಆಫ್ರಿಕಾದ ಪಾರದರ್ಶಕತೆ ಮತ್ತು ಅದರ ಇಚ್ಛೆಗಾಗಿ "ಡೇಟಾವನ್ನು ಹಂಚಿಕೊಳ್ಳಲು ಮಾತ್ರವಲ್ಲ, ಮಾಹಿತಿಯನ್ನು ಹಂಚಿಕೊಳ್ಳಲು ಮಾತ್ರವಲ್ಲದೆ ಮಾದರಿಗಳನ್ನು ಹಂಚಿಕೊಂಡಿದೆ. ಅವರ ಕಳಕಳಿಯನ್ನು WHO ಶ್ಲಾಘಿಸುತ್ತದೆ. ಅಂತೆಯೇ ಆ ದೇಶದ ಮೇಲಿನ ಪ್ರಯಾಣ ನಿಷೇಧಗಳಿಂದ ಹಲವು ಸಮಸ್ಯೆಗಳಾಗುತ್ತಿದ್ದು, ಮಾದರಿಗಳನ್ನು ದೇಶದಿಂದ ಹೊರಗೆ ಸಾಗಿಸಲು ಕೆಲವು ಸವಾಲುಗಳನ್ನು ಉಂಟುಮಾಡಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಏತನ್ಮಧ್ಯೆ, ದಕ್ಷಿಣ ಆಫ್ರಿಕಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕಬಲ್ ಡಿಸೀಸ್ ನೀಡಿರುವ ವರದಿಯನ್ವಯ ಬುಧವಾರ ಕಳೆದ 24 ಗಂಟೆಗಳಲ್ಲಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ದ್ವಿಗುಣವಾಗಿದ್ದು, ಅಂದರೆ 8,561 ಕ್ಕೆ ದ್ವಿಗುಣಗೊಂಡಿದೆ ಎಂದು ವರದಿ ಮಾಡಿದೆ. ಆದಾಗ್ಯೂ, ಸಾವಿನ ಸಂಖ್ಯೆ ಮತ್ತು ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಗಮನಾರ್ಹವಾಗಿ ಬದಲಾಗಿಲ್ಲ ಎಂದು ಅದು ಹೇಳಿದೆ.