ಮುಂಬೈ: ಕೇವಲ ಒಂದೇ ತಿಂಗಳಲ್ಲಿ ಬರೊಬ್ಬರಿ 250 ನಾಯಿಗಳನ್ನು ಕೊಂದ ಗ್ಯಾಂಗ್ ನ 2 ರೌಡಿ ಕೋತಿಗಳನ್ನು ಸೆರೆಹಿಡಿಯುವಲ್ಲಿ ನಾಗ್ಪುರ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಬೀಡ್ ನಲ್ಲಿ ಆಕ್ರಮಣಕಾರಿ ಕೋತಿಗಳ ಅಟ್ಟಹಾಸ ಮುಂದುವರೆದಿರುವಂತೆಯೇ ಅರಣ್ಯ ಇಲಾಖೆ ಸಿಬ್ಬಂದಿ ಬೃಹತ್ ಕಾರ್ಯಾಚರಣೆ ನಡೆಸಿ ದಾಳಿ ಮಾಡುತ್ತಿದ್ದ 2 ಕೋತಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಒಂದೇ ತಿಂಗಳಲ್ಲಿ ಸುಮಾರು 250ಕ್ಕೂ ಅಧಿಕ ನಾಯಿಗಳನ್ನು ಕೊಂದು ಅಟ್ಟಹಾಸ ಮೆರೆಯುತ್ತಿದ್ದ ಕೋತಿಗಳ ಗ್ಯಾಂಗ್ ನ 2 ಕೋತಿಗಳನ್ನು ಸಿಬ್ಬಂದಿ ಸೆರೆಹಿಡಿದಿದ್ದಾರೆ. ಇದೀಗ ಈ ಕೋತಿಗಳನ್ನು ನಾಗ್ಪುರಕ್ಕೆ ರವಾನೆ ಮಾಡಿ ಅಲ್ಲಿಂದ ಸಮೀಪದ ಅರಣ್ಯದೊಳಗೆ ಬಿಡಲಾಗುತ್ತದೆ ಎಂದು ಬೀಡ್ ಅರಣ್ಯಾಧಿಕಾರಿ ಸಚಿನ್ ಕಂಡ್ ಹೇಳಿದ್ದಾರೆ.
ಒಂದೇ ತಿಂಗಳಲ್ಲಿ 250 ನಾಯಿಗಳ ಕೊಂದ ಕೋತಿ ಗ್ಯಾಂಗ್
ಬೀಡ್ ನಲ್ಲಿ ಆಕ್ರಮಣಕಾರಿ ಕೋತಿಗಳ ಆರ್ಭಟ ಹೆಚ್ಚಾಗಿದ್ದು, ಸರ್ಕಾರಿ ಮೂಲಗಳ ಪ್ರಕಾರವೇ ಕಳೆದೊಂದು ತಿಂಗಳಲ್ಲಿ ಈ ಆಕ್ರಮಣಕಾರಿ ಕೋತಿಗಳು ಬರೊಬ್ಬರಿ 250 ನಾಯಿಗಳನ್ನು ಕೊಂದು ಹಾಕಿವೆಯಂತೆ. ಬೀಡ್ ಜಿಲ್ಲೆಯ ಮಜಲಗಾಂವ್‌ನಲ್ಲಿ ಈ ಘಟನೆ ನಡೆದಿದ್ದು, ಮಂಗಗಳು ನಾಯಿ ಮರಿಗಳನ್ನು ಎತ್ತರದ ಕಟ್ಟಡದ ಮೇಲೆ ಹೊತ್ತೊಯ್ದು ಅಲ್ಲಿಂದ ಕೆಳಗೆ ಎಸೆಯುತ್ತಿದ್ದು ಕೆಳಗೆ ಬಿದ್ದ ನಾಯಿಮರಿಗಳು ಮೃತಪಟ್ಟಿವೆ ಎನ್ನಲಾಗಿದೆ.
ಕೋತಿಗಳ ಸೇಡು
ಕೋತಿಗಳ ಈ ಆಕ್ರಮಣಕಾರಿ ಸ್ವಭಾವಕ್ಕೆ ಸೇಡು ಕಾರಣ ಎಂದು ಹೇಳಲಾಗುತ್ತಿದೆ. ಈಗ್ಗೆ ಒಂದು ತಿಂಗಳ ಹಿಂದೆ ನಾಯಿಗಳ ಹಿಂಡು ಕೋತಿ ಮರಿಯನ್ನು ಅಟ್ಟಾಡಿಸಿಕೊಂಡು ನಿರ್ದಯವಾಗಿ ಕೊಂದು ಹಾಕಿತ್ತು. ಇದರಿಂದ ಆಕ್ರೋಶಗೊಂಡ ಮಂಗಗಳು ಅಲ್ಲಿನ ನಾಯಿಮರಿಗಳನ್ನು ಕೊಲ್ಲುತ್ತಾ ಬಂದಿವೆ. ಕಳೆದೊಂದು ತಿಂಗಳಲ್ಲೇ ಈ ಕೋತಿಗಳ ಗ್ಯಾಂಗ್ ಬರೋಬ್ಬರಿ 250 ನಾಯಿಮರಿಗಳನ್ನು ಕೊಂದು ಹಾಕಿವೆ.
ನಾಯಿ ಮರಿಗಳೇ ನಾಪತ್ತೆ
ಲಾವೂಲ್ ಗ್ರಾಮವು ಮಜಲಗಾಂವ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿದೆ. ಸುಮಾರು 5 ಸಾವಿರ ಜನಸಂಖ್ಯೆಯ ಈ ಗ್ರಾಮದಲ್ಲಿ ಈಗ ನಾಯಿಮರಿಗಳು ಕಾಣುತ್ತಿಲ್ಲ. ಕೋತಿಗಳ ಈ ಕೃತ್ಯದಿಂದಾಗಿ ಇಲ್ಲಿ ನಾಯಿಗಳ ಸಂತತಿ ಕ್ಷೀಣಿಸಿವೆ.
ಮಂಗಗಳು ಮನುಷ್ಯರ ಮೇಲೂ ದಾಳಿ
ಕೇವಲ ನಾಯಿಗಳು ಮಾತ್ರವಲ್ವದೇ ಈ ನಾಯಿಗಳನ್ನು ರಕ್ಷಿಸಲು ಬಂದ ಮನುಷ್ಯರ ಮೇಲೂ ಕೋತಿಗಳು ದಾಳಿ ಮಾಡಿವೆ. ಮನುಷ್ಯರ ಮಕ್ಕಳು ಮಂಗಗಳ ದಾಳಿಗೆ ಒಳಗಾಗುತ್ತಿದ್ದಾರೆ.