ತಮ್ಮ ವರದಿಗಳಿಗೆ ಪ್ರತೀಕಾರವಾಗಿ 19 ಪತ್ರಕರ್ತರು ಹತ್ಯೆಗೀಡಾಗಿದ್ದಾರೆ ಎಂದು ಸಂಸ್ಥೆಯ ಸಂಪಾದಕೀಯ ನಿರ್ದೇಶಕ ಅರ್ಲೀನ್ ಗೆಟ್ಝ್ ನೇತೃತ್ವದಲ್ಲಿ ಹೊರತರಲಾದ ವರದಿಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಈ ಸಂಖ್ಯೆ 22 ಆಗಿತ್ತು. ಈ ವರ್ಷ 19 ಪತ್ರಕರ್ತರ ಹೊರತಾಗಿ, ಸಂಘರ್ಷ ವಲಯಗಳಲ್ಲಿ ವರದಿ ಮಾಡುವಾಗ ಇಬ್ಬರು ಸಾವಿಗೀಡಾಗಿದ್ದರೆ ಇನ್ನಿಬ್ಬರು ಪ್ರತಿಭಟನೆಗಳ ವರದಿ ಮಾಡುವಾಗ ಸಾವಿಗೀಡಾಗಿದ್ದಾರೆ.
ಈ ಪಟ್ಟಿಯಲ್ಲಿ ಬಿಹಾರದಲ್ಲಿ ಹತ್ಯೆಗೀಡಾದ ಬಿಎನ್‍ಎನ್ ನ್ಯೂಸ್‍ನ ಅವಿನಾಶ್ ಝಾ, ಸುದರ್ಶನ್ ಟಿವಿಯ ಮನೀಶ್ ಕುಮಾರ್ ಸಿಂಗ್ ಹಾಗೂ ರೂಟರ್ಸ್ ಫೋಟೋಜರ್ನಲಿಸ್ಟ್ ಡೇನಿಶ್ ಸಿದ್ದೀಖಿ ಸೇರಿದ್ದಾರೆ. ಅವಿನಾಶ್ ಝಾ ಅವರು ಮೆಡಿಕಲ್ ಮಾಫಿಯಾ ಅನಾವರಣಗೊಳಿಸಿದ ವರದಿಗಾಗಿ ಹತ್ಯೆಗೀಡಾಗಿದ್ದರೆ, ಪುಲಿಟ್ಝರ್ ಪ್ರಶಸ್ತಿ ವಿಜೇತ ಡೇನಿಶ್ ಅವರು ಅಫ್ಗಾನಿಸ್ತಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೇಳೆ ತಾಲಿಬಾನಿಗಳಿಂದ ಹತ್ಯೆಗೀಡಾಗಿದ್ದಾರೆ.
ಮೆಕ್ಸಿಕೋದಲ್ಲಿ ಮೂರು ಪತ್ರಕರ್ತರನ್ನು ಅವರ ವರದಿಗಾಗಿ ಸಾಯಿಸಲಾಗಿದ್ದರೆ, ಭಾರತದಲ್ಲಿ ಇಂತಹ ನಾಲ್ಕು ಪ್ರಕರಣಗಳು ವರದಿಯಾಗಿವೆ.
ಗರಿಷ್ಠ ಪತ್ರಕರ್ತರನ್ನು ಜೈಲಿಗಟ್ಟಿದ ದೇಶಗಳ ಪೈಕಿ ಚೀನಾ ಮೊದಲ ಸ್ಥಾನದಲ್ಲಿದೆ. ಇಲ್ಲಿನ 50 ಪತ್ರಕರ್ತರು ಜೈಲಿನಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಮ್ಯಾನ್ಮಾರ್ ಇದ್ದು ಇಲ್ಲಿ 26 ಪತ್ರಕರ್ತರು ಜೈಲಿನಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ ಈಜಿಪ್ಟ್, ವಿಯೆಟ್ನಾಂ ಮತ್ತು ಬೆಲಾರಸ್ ಇವೆ. ಭಾರತವು ಈ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದೆ.