ಕೊಚ್ಚಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ನೇತೃತ್ವದಲ್ಲಿ ಮೋಟಾರು ಒಕ್ಕೂಟಗಳು ಇದೇ 30ರಂದು ರಾಜ್ಯಾದ್ಯಂತ ಮುಷ್ಕರ ನಡೆಸಲಿವೆ.
ಆಟೋ ಟ್ಯಾಕ್ಸಿ ದರ ಹೆಚ್ಚಳ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‍ಟಿಗೆ ಸೇರಿಸುವುದು, ಇಂಧನ ಬೆಲೆ ಇಳಿಕೆ, ಮೋಟಾರು ಕಾರ್ಮಿಕರಿಗೆ ಸಬ್ಸಿಡಿ ಇಂಧನ ನೀಡುವುದು, ಕೇರಳದಲ್ಲಿ ಸಿಎನ್‍ಜಿ ವಾಹನಗಳ ಕ್ಯಾಲಿಬ್ರೇಶನ್ ಪರೀಕ್ಷೆಯನ್ನು ಜಾರಿಗೊಳಿಸುವುದು ಮತ್ತು ವಾಹನ ತೆರಿಗೆ ಹಿಂತೆಗೆಯುವುದು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಕೇರಳ ಖಾಸಗಿ ಬಸ್ ಮತ್ತು ಹೆವಿ ಮಜ್ದೂರ್ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಘುರಾಜ್, ಕೇರಳ ಟ್ಯಾಕ್ಸಿ ಮತ್ತು ಲೈಟ್ ಮೋಟಾರ್ ಮಜ್ದೂರ್ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದ್ ಆರ್.ತಂಬಿ ಮತ್ತು ಕೇರಳ ಪ್ರದೇಶ ಆಟೋರಿಕ್ಷಾ ಮಜ್ದೂರ್ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎನ್.ಮೋಹನನ್ ಪತ್ರಿಕಾ ಪ್ರಕಟಣೆಯಲ್ಲಿ ಮುಷ್ಕರ ಘೋಷಿಸಿದ್ದಾರೆ.