HEALTH TIPS

ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್: ರಾಜ್ಯದಲ್ಲಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಕನ್ನಡಪರ ಸಂಘಟನೆಗಳ ಆಗ್ರಹ

      ಬೆಳಗಾವಿ: ಗಡಿಜಿಲ್ಲೆ ಬೆಳಗಾವಿಯಲ್ಲಿ ಕನ್ನಡಿಗರು, ಕನ್ನಡ ನಾಡಿನ ಆಸ್ತಿಪಾಸ್ತಿ ಮೇಲೆ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ-MES ) ದಬ್ಬಾಳಿಕೆ ಹಾಗೂ ಖಂಡಿಸಿ, ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧ ಮಾಡಬೇಕೆಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಹೊಸ ವರ್ಷ(New year) ಮುನ್ನಾದಿನ ಡಿಸೆಂಬರ್ 31ರಂದು ಕರ್ನಾಟಕ ಬಂದ್ ಗೆ  ಕರೆ ನೀಡಿವೆ.

           ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್: ಕರ್ನಾಟಕ, ಕನ್ನಡ ನಾಡು ನುಡಿಯ ಒಗ್ಗಟ್ಟಿಗೆ ಕನ್ನಡಿಗರು ಈ ಸಂದರ್ಭದಲ್ಲಿ ಒಟ್ಟಾಗಿ ಶಕ್ತಿಯನ್ನು ಪ್ರದರ್ಶಿಸಬೇಕು. 25ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ. ಕನ್ನಡಿಗರೆಲ್ಲರೂ ನಮಗೆ ಬೆಂಬಲ ನೀಡಬೇಕು. ಡಿಸೆಂಬರ್ 31ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬೇರೆಲ್ಲಾ ಸೇವೆಗಳಿಗೆ ವ್ಯತ್ಯಯವುಂಟಾಗಲಿದೆ ಎಂದು ಕನ್ನಡ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಇಂದು ಬೆಂಗಳೂರಿನಲ್ಲಿ ಘೋಷಿಸಿದ್ದಾರೆ. 

        ಗಡಿಜಿಲ್ಲೆ ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿ ಎಂಇಎಸ್ ದಬ್ಬಾಳಿಕೆ, ದೌರ್ಜನ್ಯ ಹಿನ್ನೆಲೆಯಲ್ಲಿ ಎಂಇಎಸ್ ಸಂಘಟನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಎಂಇಎಸ್ ಬ್ಯಾನ್ ಮಾಡುವಂತೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಿದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಲು ಬಂದ್ ಗೆ ಕರೆ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. 

      ಇಂದು ಸುದ್ದಿಗೋಷ್ಠಿಯಲ್ಲಿ ವಾಟಾಳ್ ನಾಗರಾಜ್ ಹೇಳಿದ್ದೇನು? ಎಂಇಎಸ್​ ದಬ್ಬಾಳಿಕೆ ಹಾಗೂ ದೌರ್ಜನ್ಯ ಖಂಡಿಸಿ ವಿವಿಧ ಸಂಘಟನೆಗಳಿಂದ ಡಿ.31ರಂದು ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಕರ್ನಾಟಕ ಬಂದ್ ಮಾಡಲಾಗುತ್ತದೆ. ಇದರಲ್ಲಿ ಕನ್ನಡಿಗರೆಲ್ಲರೂ ಒಟ್ಟಾಗಿ ನಮ್ಮ ಇಚ್ಛಾಶಕ್ತಿಯನ್ನು ತೋರಿಸಬೇಕು. ಬೆಂಗಳೂರು ಟೌನ್ ಹಾಲ್​ನಿಂದ ಕನ್ನಡಿಗರ ಶಕ್ತಿ ಪ್ರದರ್ಶನಗೊಳ್ಳಲಿದೆ ಎಂದರು.

      ಅಧಿಕಾರ ಶಾಶ್ವತವಲ್ಲ, ಬಿಜೆಪಿ ನೇತೃತ್ವದ ಸರ್ಕಾರ ಈ ಸಂದರ್ಭದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಕರ್ನಾಟಕದಲ್ಲಿ ಸರ್ಕಾರ, ಪೊಲೀಸರು ಇದ್ದಾರೆಯೇ? 70 ವರ್ಷದಿಂದ ಎಂಇಎಸ್​ನವರಿಂದ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಕನ್ನಡ ಉಳಿದಿದ್ರೆ ಕನ್ನಡ ಪರ ಹೋರಾಟಗಾರರಿಂದ ಮಾತ್ರ. ಉದ್ಧವ್ ಠಾಕ್ರೆ ಸರ್ಕಾರವನ್ನು ರಾಷ್ಟ್ರಪತಿ ವಜಾ ಮಾಡಬೇಕು. ಉದ್ಧವ್ ಠಾಕ್ರೆ ದಬ್ಬಾಳಿಕೆ ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ. ಬೆಳಗಾವಿಯ ರಾಜಕಾರಣಿಗಳೇ ಎಂಇಎಸ್ ಸಂಘಟನೆಗಳ ಕಾರ್ಯಕರ್ತರ ಏಜೆಂಟ್. ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟರೆ ಕನ್ನಡಿಗರಿಗೆ ಬೆಂಕಿ ಇಟ್ಟ ಹಾಗೆ ಎಂದು ವಾಟಾಳ್ ನಾಗರಾಜ್ ಆಕ್ರೋಶ ಹೊರಹಾಕಿದರು.

       ಅಗತ್ಯ ವಸ್ತುಗಳು ಲಭ್ಯ: ಡಿಸೆಂಬರ್ 31ರಂದು ಕರ್ನಾಟಕ ಬಂದ್ ಇದ್ದರೂ ಜನರಿಗೆ ಹಾಲು, ಪೇಪರ್, ಆರೋಗ್ಯ ಸೇವೆಗಳು ಸೇರಿದಂತೆ ಅಗತ್ಯ ವಸ್ತುಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇದಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಇನ್ನು ಹೊಸ ವರ್ಷ ಮುನ್ನಾದಿನವಾಗಿದ್ದು, ಹೊಸ ವರ್ಷಾಚರಣೆ ಮಾಡುವವರು ಹೇಗಿದ್ದರೂ ಸಾಯಂಕಾಲವಲ್ಲವೇ ಮಾಡುವುದು, ಹಾಗಾಗಿ ಹೊಸ ವರ್ಷ ಸಂಭ್ರಮಾಚರಣೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.

         ಸರ್ಕಾರಕ್ಕೆ ಡಿ.29ರವರೆಗೆ ಡೆಡ್ ಲೈನ್: ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟುಮಾಡಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಿ ಕನ್ನಡ ಸಾರ್ವಭೌಮತ್ವವನ್ನು ಕಾಪಾಡಲು ಸರ್ಕಾರಕ್ಕೆ ಕನ್ನಡಪರ ಸಂಘಟನೆಗಳು ಡಿಸೆಂಬರ್ 29ರವರೆಗೆ ಇನ್ನೂ ಒಂದು ಡೆಡ್ ಲೈನ್ ನೀಡಿವೆ. ಅಷ್ಟರೊಳಗೆ ಬೇಡಿಕೆ ಈಡೇರಿಸದಿದ್ದರೆ ಡಿಸೆಂಬರ್ 31ರಂದು ಬಂದ್ ಖಂಡಿತವಾಗಿರುತ್ತದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ. 

        ಬಂದ್ ಗೆ ಅಪಸ್ವರ: ಡಿಸೆಂಬರ್ 31ರಂದು ಹೊಸ ವರ್ಷ ಮುನ್ನಾದಿನವಾಗಿರುವುದರಿಂದ ಅಂದು ಬಂದ್ ಮಾಡಿದರೆ ಬಹಳಷ್ಟು ಜನರಿಗೆ ತೊಂದರೆಯಾಗುತ್ತದೆ, ನೀವು ಬೇಕಿದ್ದರೆ 30ರಂದೋ, ಇನ್ನೊಂದು ದಿನವೋ ಮಾಡಿಕೊಳ್ಳಿ ಎಂದು ವಂದೇ ಮಾತರಂ ಸಂಘಟನೆಯ ಶಿವ ಕುಮಾರ್ ಮತ್ತು ಅವರ ಬೆಂಬಲಿಗರು ಸುದ್ದಿಗೋಷ್ಠಿ ವೇಳೆ ಬಂದು ಅಪಸ್ವರ ಎದ್ದರು. ಅದಕ್ಕೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೆರಳಿ ಅವರಿಗೆ ಮುತ್ತಿಗೆ ಹಾಕಿ ಥಳಿಸುವ ಪ್ರಯತ್ನ ಮಾಡಿದರು.

     ಸುದ್ದಿಗೋಷ್ಠಿಯಲ್ಲಿ ಗೊಂದಲ, ಗದ್ದಲ ವಾತಾವರಣ ಉಂಟಾಗಿ ಕೆಲಹೊತ್ತು ಸುದ್ದಿಗೋಷ್ಠಿ ನಿಂತುಹೋಗಿತ್ತು. ನಂತರ ಪೊಲೀಸರು ಬಂದು ಶಿವಕುಮಾರ್ ಅವರನ್ನು ವಶಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ಸುದ್ದಿಗೋಷ್ಠಿ ಮುಂದುವರಿಯಿತು. ಸುದ್ದಿಗೋಷ್ಠಿಯಲ್ಲಿ ಸಾ ರಾ ಗೋವಿಂದ್, ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries