ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ) 37ನೇ ಕಾಸರಗೋಡು ಜಿಲ್ಲಾ ಪ್ರತಿನಿಧಿ ಸಮ್ಮೇಳನ ಕಾಞಂಗಾಡು ಮಾವುಂಗಾಲಿನ ಐಎಂಎ ಸಭಾಂಗಣದ `ಮನ್ಸೂರ್ ನಗರ'ದಲ್ಲಿ ಮಂಗಳವಾರ ನಡೆಯಿತು.
ಬೆಳಗ್ಗೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ರಾಜ್ಯ ಅಧ್ಯಕ್ಷ ವಿಜಯನ್ ಮಾರಂಜೇರಿ ದೀಪಬೆಳಗಿಸಿ ಉದ್ಘಾಟಿಸಿದರು. ಅವರು ಮಾತನಾಡಿ, ತಮ್ಮ ಉದ್ಯೋಗದೊಂದಿಗೆ ಸಂಘಟನೆಯ ಚಟುವಟಿಕೆಗಳನ್ನು ಸಮರ್ಥವಾಗಿ ಮುನ್ನಡೆಸುವ ಸದಸ್ಯರ ಶ್ರಮದಿಂದ ಇಂದು ನಮ್ಮ ಸಂಘಟನೆಯು 37ನೇ ಸಮ್ಮೇಳವನ್ನು ನಡೆಸುತ್ತಿದೆ. ಸಂಘಟನೆಯು ನಮ್ಮ ಉಸಿರಾಗಿದೆ. ಉತ್ತಮವಾದ ಕಾರ್ಯಗಳನ್ನು ಸಾಧಿಸುವ ವ್ಯಕ್ತಿ ಎತ್ತರಕ್ಕೇರುತ್ತಾನೆ. ಜಾತಿ ಮತ ಬಣ್ಣ ಬೇಧವಿಲ್ಲದ ರಾಜ್ಯದ ಏಕೈಕ ಸಂಘಟನೆ ಎಕೆಪಿಎ ಎಂಬುದು ನಮಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
ಎಕೆಪಿಎ ಕಾಸರಗೋಡು ಜಿಲ್ಲಾ ಅಧ್ಯಕ್ಷ ಶರೀಫ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೋಶಾಧಿಕಾರಿ ಜೋಯ್ ಗ್ರೇಸ್, ಕಾಸರಗೋಡು ಜಿಲ್ಲಾ ಉಸ್ತುವಾರಿ ರಾಜ್ಯ ಕಾರ್ಯದರ್ಶಿ ಪಿ.ಟಿ.ಕೆ. ರಜೀಶ್, ಪ್ರಶಾಂತ್ ತೈಕಡಪ್ಪುರಂ, ಶ್ರೀಜಿತ್ ನಿಲಾಯಿ, ಹರೀಶ್ ಪಾಲಕ್ಕುನ್ನು, ಸುದರ್ಶನನ್, ಸುನಿಲ್ ಕುಮಾರ್, ಸುಧೀರ್, ದಿನೇಶ್, ವಿನು ವೇದಿಕೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲಾ ಕಾರ್ಯದರ್ಶಿ ಮನೋಹರನ್ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾ ಉಪಾಧ್ಯಕ್ಷ ಎನ್.ಎ.ಭರತನ್ ಸ್ವಾಗತಿಸಿ, ಕೋಶಾಧಿಕಾರಿ ಸುಗುಣನ್ ಇರಿಯ ವಂದಿಸಿದರು.