ಮುಂಬೈ: ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು ಏರಿಕೆ ಕಾಣುತ್ತಿದೆ. ಈ ನಡುವೆ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ, "ಕೊರೊನಾ ಲಸಿಕೆ ನಡುವಿನ ಅಂತರವನ್ನು ನಾಲ್ಕು ವಾರಗಳಿಗೆ ಇಳಿಸಿ ಹಾಗೂ ಕೋವಿಡ್ ಲಸಿಕೆ ಪಡೆಯುವ ಕನಿಷ್ಠ ವಯಸ್ಸಿನ ಅರ್ಹತೆಯನ್ನು 15 ವರ್ಷಕ್ಕೆ ಇಳಿಕೆ ಮಾಡಿ," ಎಂದು ಆಗ್ರಹ ಮಾಡಿದ್ದಾರೆ. ಆದಿತ್ಯ ಠಾಕ್ರೆ ಈ ವಿಚಾರದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಪ್ರಮುಖವಾಗಿ ಮೂರು ಸಲಹೆಗಳನ್ನು ಉಲ್ಲೇಖ ಮಾಡಿದ್ದಾರೆ. ರಾಜ್ಯದಲ್ಲಿ ಕೋವಿಡ್ ರೂಪಾಂತರ ಓಮಿಕ್ರಾನ್ ಹಿನ್ನೆಲೆಯಿಂದಾಗಿ ವೈದ್ಯರೊಂದಿಗೆ ಸಂವಾದ ನಡೆಸಿ ಮೂರು ಸಲಹೆಗಳನ್ನು ಪಟ್ಟಿ ಮಾಡಿದ್ದಾರೆ.
ಎಲ್ಲಾ ಕೋವಿಡ್ ಮುಂಚೂಣಿ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ವರ್ಷದ ಆರಂಭದಲ್ಲಿ ಕೋವಿಡ್ ಲಸಿಕೆಯನ್ನು ಪ್ರಾರಂಭ ಮಾಡಿದಾಗ ಮೂರನೇ ಡೋಸ್ ಕೋವಿಡ್ ಲಸಿಕೆಯನ್ನು ಸ್ವೀಕಾರ ಮಾಡಲು ಅನುಮತಿ ನೀಡಬೇಕು ಎಂಬುವುದು ಆದಿತ್ಯ ಠಾಕ್ರೆ ವೈದ್ಯರೊಂದಿಗೆ ಸಮಾಲೋಚನೆ ಮಾಡಿ ನೀಡಿರುವ ಮೂರನೇ ಸಲಹೆ ಆಗಿದೆ.
ಕೊರೊನಾವೈರಸ್ ಸೋಂಕಿನ ವಿರುದ್ಧದ ಲಸಿಕೆ ಪಡೆಯಲು ಅರ್ಹ ವಯಸ್ಸಿನ ಮಿತಿಯನ್ನು ಇಳಿಕೆ ಮಾಡುವಂತೆಯೂ ಆದಿತ್ಯ ಠಾಕ್ರೆ ಸಲಹೆಯನ್ನು ನೀಡಿದ್ದಾರೆ. "ಕೋವಿಡ್ ಲಸಿಕೆಯನ್ನು ಪಡೆಯಲು ಅರ್ಹ ವಯಸ್ಸಿನ ಮಿತಿಯನ್ನು 18 ರಿಂದ 15 ಕ್ಕೆ ಇಳಿಕೆ ಮಾಡಿ," ಎಂದು ಆದಿತ್ಯ ಠಾಕ್ರೆ ಆಗ್ರಹಿಸಿದ್ದಾರೆ. ಶಿವಸೇನೆ ನಾಯಕ ಕೋವಿಡ್ ಲಸಿಕೆಯ ನಡುವಿನ ಅಂತರವನ್ನು ಇಳಿಕೆ ಮಾಡುವ ಬಗ್ಗೆಯೂ ಆಗ್ರಹವನ್ನು ಆದಿತ್ಯ ಠಾಕ್ರೆ ಮಾಡಿದ್ದಾರೆ. "ಜನರಿಗೆ ಕೊರೊನಾ ಲಸಿಕೆಯನ್ನು ಪಡೆಯುವ ನಡುವಿನ ಅಂತರವನ್ನು ನಾಲ್ಕು ವಾರಗಳಿಗೆ ಇಳಿಕೆ ಮಾಡಿ," ಎಂದು ಒತ್ತಾಯ ಮಾಡಿದ್ದಾರೆ.
"ಯಾರು ವಿದೇಶದಲ್ಲಿ ಕೆಲಸಕ್ಕಾಗಿ ಹಾಗೂ ವಿದ್ಯಾಭ್ಯಾಸಕ್ಕಾಗಿ ತೆರಳಲು ಬಯಸುತ್ತಾರೋ, ಅವರಿಗೆ ಅವಕಾಶ ನೀಡಿರುವಂತೆ, ಕೋವಿಡ್ ಲಸಿಕೆ ನಡುವಿನ ಅಂತರವನ್ನು ನಾಲ್ಕು ವಾರಗಳಿಗೆ ಇಳಿಕೆ ಮಾಡಿದರೆ, ನಗರದಲ್ಲಿ ನೂರು ಶೇಕಡ ಮಂದಿಗೆ ಎರಡನೇ ಡೋಸ್ ಲಸಿಕೆಯನ್ನು 2022 ರ ಜನವರಿ ಮಧ್ಯದೊಳಗೆ ಪೂರ್ಣ ಮಾಡಲು ಸಾಧ್ಯವಾಗುತ್ತದೆ," ಎಂದು ತಿಳಿಸಿದ್ದಾರೆ.ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಪ್ರಕರಣ ದೇಶದ ನಾಲ್ಕನೇ ಓಮಿಕ್ರಾನ್ ಪ್ರಕರಣವು ಮುಂಬೈನಲ್ಲಿ ಕಾಣಿಸಿಕೊಂಡಿತ್ತು. ಈ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಒಟ್ಟು ಏಳು ಓಮಿಕ್ರಾನ್ ಪ್ರಕರಣಗಳು ಕಾಣಿಸಿಕೊಂಡಿದೆ. ಡಿಸೆಂಬರ್ 6 ರಂದು ಮತ್ತೆ ಎರಡು ಓಮಿಕ್ರಾನ್ ಪ್ರಕಣರಗಳು ಮುಂಬೈನಲ್ಲಿ ಪತ್ತೆಯಾಗಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಒಟ್ಟು ಓಮಿಕ್ರಾನ್ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಭಾರತದಲ್ಲಿ ಮೊದಲ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್ ಪ್ರಕರಣವು ಕರ್ನಾಟಕ ರಾಜ್ಯದಲ್ಲಿ ಪತ್ತೆಯಾಗಿದೆ. ಕರ್ನಾಟಕದಲ್ಲಿ ಇಬ್ಬರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಬಳಿಕ ಗುಜರಾತ್‌ನಲ್ಲಿ ಒಂದು ಪ್ರಕರಣವು ವರದಿ ಆಗಿದೆ. ಜಿಂಬಾಬ್ವೆಯಿಂದ ಜಾಮ್‌ನಗರಕ್ಕೆ ವಾಪಸ್ ಆಗಿದ್ದ 72 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಗುಜರಾತ್ ಆರೋಗ್ಯ ಇಲಾಖೆ ಹೇಳಿದೆ. ಆ ಬಳಿಕ ನಾಲ್ಕನೇ ಪ್ರಕರಣವು ಮಹಾರಾಷ್ಟ್ರದಲ್ಲಿ ದಾಖಲು ಆಗಿದೆ. ಆ ನಂತರ ಭಾರತದ ರಾಜಧಾನಿ ನವದೆಹಲಿಯಲ್ಲಿ ಕೊರೊನಾ ವೈರಸ್‌ನ ಹೊಸ ಓಮಿಕ್ರಾನ್‌ನ ಒಂದು ಪ್ರಕರಣ ಕಾಣಿಸಿಕೊಂಡಿದ್ದು, ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆ ಕಂಡಿತ್ತು. ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಒಂದೇ ಬಾರಿಗೆ ಮಹಾರಾಷ್ಟ್ರದಲ್ಲಿ ಒಟ್ಟು ಏಳು ಓಮಿಕ್ರಾನ್ ಪ್ರಕರಣಗಳು ಕಾಣಿಸಿಕೊಂಡಿದೆ. ಆ ನಂತರ ಜೈಪುರದಲ್ಲಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಒಂಬತ್ತು ಮಂದಿಯಲ್ಲಿ ಓಮಿಕ್ರಾನ್ ಕಂಡು ಬಂದಿದೆ. ಮತ್ತೆ ಮುಂಬೈನಲ್ಲಿ ಎರಡು ಓಮಿಕ್ರಾನ್ ಪ್ರಕರಣ ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು 23 ಕ್ಕೆ ಏರಿಕೆ ಆಗಿದೆ.