ನವದೆಹಲಿ: ಕೊರೋನಾದ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಪತ್ತೆಯಾಗಿದ್ದು, ಈ ಹೊಸ ಸೋಂಕು ಹರಡುತ್ತಿರುವ ಭೀತಿ ಎದುರಾಗಿತ್ತುದ್ದಂತೆಯೇ 40 ಹಾಗೂ ಮೇಲ್ಪಟ್ಟ ವಯಸ್ಸಿನವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲು ಭಾರತೀಯ ವಿಜ್ಞಾನಿಗಳು ಶಿಫಾರಸು ಮಾಡಿದ್ದಾರೆ.
40 ವರ್ಷದ ವಯಸ್ಸಿನವರು ಹೊಸ ರೂಪಾಂತರಿ ವೈರಾಣುವಿನಿಂದ ಹೆಚ್ಚಿನ ಅಪಾಯ ಹಾಗೂ ಹೆಚ್ಚು ತೆರೆದುಕೊಳ್ಳುವ ಮಂದಿಯಾಗಿರುವುದರಿಂದ ಈ ವಯಸ್ಸಿನ ಜನಸಂಖ್ಯೆಗೆ ಬೂಸ್ಟರ್ ಡೋಸ್ ಲಸಿಕೆ ನೀಡಬಹುದೆಂಬ ಅಭಿಮನತ ಭಾರತೀಯ ವಿಜ್ಞಾನಿಗಳದ್ದಾಗಿದೆ.
ಭಾರತದ SARS-CoV-2 ಜೀನೋಮಿಕ್ಸ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಮ್ ನ ವಾರದ ಬುಲೆಟಿನ್ ನಲ್ಲಿ ಈ ಶಿಫಾರಸನ್ನು ಮಂಡಿಸಲಾಗಿದೆ. ಇನ್ನೂ ಲಸಿಕೆ ಪಡೆಯದ ಹೆಚ್ಚು ಅಪಾಯವನ್ನು ಎದುರಿಸಬಹುದಾದ ಮಂದಿಗೆ ಲಸಿಕೆ ಹಾಗೂ 40 ಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿರುವ ಮಂದಿಗೆ ಬೂಸ್ಟರ್ ಡೋಸ್ ನೀಡುವುದನ್ನು ಸರ್ಕಾರ ಪರಿಗಣಿಸಬೇಕಿದೆ ಎಂದು ಜೀನೋಮಿಕ್ಸ್ ಸೀಕ್ವೆನ್ಸಿಂಗ್ ಕನ್ಸೋರ್ಟಿಯಮ್ ಸಲಹೆ ನೀಡಿದೆ.
ಲೋಕಸಭೆಯಲ್ಲಿ ಕೊರೋನಾ ಸಾಂಕ್ರಾಮಿಕ ಪರಿಸ್ಥಿತಿಯ ಚರ್ಚೆಯ ಸಂದರ್ಭದಲ್ಲೂ ಸಂಸದರು ಬೂಸ್ಟರ್ ಡೋಸ್ ಗಾಗಿ ಆಗ್ರಹಿಸಿದ್ದರು. ಈ ವೈರಾಣು ಸೋಂಕು ಇದೆಯೇ ಇಲ್ಲವೇ ಎಂಬುದನ್ನು ವೇಗವಾಗಿ ಪತ್ತೆ ಮಾಡುವುದಕ್ಕೆ ಜಿನೋಮಿಕ್ ಕಣ್ಗಾವಲು ಬಹಳ ಮುಖ್ಯವಾಗುತ್ತದೆ ಎಂದು ಐಎನ್ ಎಸ್ಎಸಿಒಜಿ ಹೇಳಿದೆ.